ಗಾಝಿಯಾಬಾದ್; ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರ ಕಾರಿನ ಮೇಲೆ ಗುಂಡು ಹಾರಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹಪೂರ್ SP ದೀಪಕ್ ಭುಕೇರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾದ ಮತ್ತೋರ್ವ ಪರಾರಿಯಾಗಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಗುಂಡಿನ ದಾಳಿ ನಡೆದ ಸ್ಥಳದ CCTVಗಳನ್ನು ಪರಿಶೀಲಿಸಲಿಸಿದ ಬಳಿಕ ದೊರೆತ ಮಾಹಿತಿಯನ್ನು ಆಧರಿಸಿ ಓರ್ವನನ್ನು ಬಂಧಿಸಲಾಗಿದೆ ಎಂದು SP ದೀಪಕ್ ಭುಕೇರ್ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಪಿಸ್ತೂಲ್’ಅನ್ನು ಈತನಿಂದ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆೆ. ಮೂಲಗಳ ಪ್ರಕಾರ ಬಂಧಿತನನ್ನು ಸಚಿನ್ ಎಂದು ಗುರುತಿಸಲಾಗಿದೆ. ಆದರೆ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ರಾಷ್ಟ್ರೀಯ ಹೆದ್ದಾರಿ 24ರಲ್ಲಿನ ಹಪೂರ್- ಗಾಝಿಯಾಬಾದ್ ಮಾರ್ಗದ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಗುರುವಾರ ಸಂಜೆ 6 ಗಂಟೆ ವೇಳೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು.
‘ತಮ್ಮ ಕಾರಿನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಮೂರ್ನಾಲ್ಕು ಮಂದಿ ಗುಂಡು ಹಾರಿಸಿ, ಪರಾರಿಯಾದರು. ನನ್ನ ಕಾರು ಪಂಕ್ಟರ್ ಆಯಿತು. ಆದರೆ, ಮತ್ತೊಂದು ಕಾರಿಗೆ ಸ್ಥಳಾಂತರವಾಗಿ ಅಲ್ಲಿಂದ ನಿರ್ಗಮಿಸಿದ್ದೇನೆ. ನಾವೆಲ್ಲರೂ ಸುರಕ್ಷಿತರಾಗಿದ್ದೇವೆ’ ಎಂದು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.