ನವದೆಹಲಿ: ಜಹಾಂಗೀರ್ ಪುರಿ ಧ್ವಂಸ ಕಾರ್ಯಾಚರಣೆಯ ವಿರುದ್ಧ ಜಮೀಯತ್ ಉಲಮಾ-ಇ-ಹಿಂದ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಇಂದು ನಡೆಸಿದ್ದು ಯಥಾಸ್ಥಿತಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಆದೇಶ ಹೊರಡಿಸಿದೆ.
ಕಳೆದ ವಾರ ಕೋಮುಗಲಭೆಗಳು ನಡೆದ ಜಹಾಂಗೀರ್ ಪುರಿ ಪ್ರದೇಶದಲ್ಲಿ ಅತಿಕ್ರಮಣದಾರರ ವಿರುದ್ಧ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಾರಂಭಿಸಿದ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ನಿನ್ನೆ ಆದೇಶ ಹೊರಡಿಸಿದ್ದರೂ ಆದೇಶ ಪ್ರತಿ ತಲುಪಿಲ್ಲ ಎಂಬ ನೆಪವೊಡ್ಡಿ ಹಲವು ಆಸ್ತಿಗಳನ್ನು ನೆಲಸಮ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗುರುವಾರ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಆದೇಶ ನೀಡಿದೆ.
ಇದನ್ನೂ ಓದಿ :ಸುಪ್ರೀಂ ಕೋರ್ಟ್ ಸೂಚನೆಯ ಬಳಿಕವೂ ನಿಲ್ಲದ ʻಬುಲ್ಡೋಝರ್ ಕಾರ್ಯಾಚರಣೆʼ
ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಹಿರಿಯ ಅಡ್ವೊಕೇಟ್ ದುಷ್ಯಂತ್ ದವೆ ಅವರ ಉಲ್ಲೇಖದ ಮೇಲೆ ಯಥಾಸ್ಥಿತಿಗೆ ಆದೇಶಿಸಿದ್ದು ಸಂವಿದಾನ ವಿರೋಧಿ ಚಟುವಟಿಕೆಗೆ ತಡೆ ಹೇರಿದೆ.
ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿದ ನಮ್ಮ ಆದೇಶವನ್ನು ಎನ್‌ಡಿಎಂಸಿ ಮೇಯರ್ ಅವರಿಗೆ ತಿಳಿಸಿದ ನಂತರವೂ ನೆಲಸಮ ಕಾರ್ಯಾಚರಣೆ ಮುಂದುವರೆಸಿದ ಕ್ರಮವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಲಿದೆ ಎಂದು ಪೀಠ ಹೇಳಿತು.