► ಸುಪ್ರೀಂ ಕೋರ್ಟ್ ಆದೇಶ ನಮಗೆ ತಲುಪಿಲ್ಲ ಎಂದ ಅಧಿಕಾರಿಗಳು
ನವದೆಹಲಿ: ಹನುಮ ಜಯಂತಿ ಮೆರವಣಿಗೆ ವೇಳೆ ಘರ್ಷಣೆ ನಡೆದಿದ್ದ ವಾಯವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ʻಬುಲ್ಡೋಝರ್ ಕಾರ್ಯಾಚರಣೆʼ ಪ್ರಾರಂಭವಾಗಿದೆ. ಗಲಭೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿರುವ ಆರೋಪಿಗಳು ಜಹಾಂಗೀರ್ ಪುರಿ ಪ್ರದೇಶದಲ್ಲಿ ʻಅಕ್ರಮ ನಿರ್ಮಾಣʼಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಆರೋಪಿಸಿದ್ದರು. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ್ ಗುಪ್ತಾ ಅಧಿಕಾರಿಗಳನ್ನು ಆಗ್ರಹಿಸಿದ್ದರು.
ಇದರ ಬೆನ್ನಲ್ಲೇ ಉತ್ತರ ದೆಹಲಿ ಮಹಾನಗರ ಪಾಲಿಕೆ, ಬುಧವಾರ ಬೆಳಗ್ಗಿನಿಂದಲೇ ʻಬುಲ್ಡೋಝರ್ ಕಾರ್ಯಾಚರಣೆʼ ಪ್ರಾರಂಭಿಸಿದೆ. ಘರ್ಷಣೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಯುವಕರು ಸೇರಿದಂತೆ 25 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ತೆರವು ಕಾರ್ಯಾಚರಣೆಗೆ ತಡೆ ಕೋರಿ ಕೋರಿ ಹಿರಿಯ ವಕೀಲ ದುಷ್ಯಂತ್ ದವೆ ಸಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಾರ್ಯಾಚರಣೆಗೆ ತಡೆ ನೀಡಿ, ಯಥಾಸ್ಥಿತಿ ಕಾಪಾಡುವಂತೆ ಹೇಳಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶ ನಮಗೆ ತಲುಪಿಲ್ಲ ಎಂದು ಹೇಳಿರುವ ಉತ್ತರ ದೆಹಲಿ ಮಹಾನಗರ ಪಾಲಿಕೆ ಆಯುಕ್ತರು, ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಹನುಮ ಜಯಂತಿ ಮೆರವಣಿಗೆ ವೇಳೆ ಕಳೆದ ಶನಿವಾರ ವಾಯವ್ಯ ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು. ಪರಸ್ಪರ ಕಲ್ಲು ತೂರಾಟ ನಡೆದು, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಕಲ್ಲು ತೂರಾಟದಿಂದಾಗಿ ಕೆಲ ಪೊಲೀಸರು ಗಾಯಗೊಂಡಿದ್ದರು.