ಬುಲ್ಡೋಜರ್ ನ್ಯಾಯ, ಸಂಪೂರ್ಣ ಕಾನೂನುಬಾಹಿರ: ನಿವೃತ್ತ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್

Prasthutha|

ಲಕ್ನೋ: ವ್ಯಕ್ತಿ ಕಸ್ಟಡಿಯಲ್ಲಿರುವಾಗ ಅದೂ ಭಾನುವಾರ ಬಂದು ಒಬ್ಬ ವ್ಯಕ್ತಿಯ ಕಟ್ಟಡ ಒಡೆಯುವುದು ಕಾನೂನುಬದ್ಧವಲ್ಲ. ಇದು ತಾಂತ್ರಿಕ ಪ್ರಶ್ನೆಯಲ್ಲ, ಇದೊಂದು ಕಾನೂನು ಪ್ರಶ್ನೆ ಎಂದು  ಅಲಹಾಬಾದ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಹೇಳಿದ್ದಾರೆ.

- Advertisement -

ಭಾನುವಾರ ಪ್ರಯಾಗ್ ರಾಜ್ ನಲ್ಲಿ ಮುಹಮ್ಮದ್ ಜಾವೇದ್ ಅವರ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟಿನಲ್ಲಿ ಈ ಸಂಬಂಧ ಪ್ರಕರಣಗಳು ಇದ್ದು, ಅವು ಎಳೆದುಕೊಂಡು ಹೋಗುತ್ತಿವೆ.

ನಗರಗಳಲ್ಲಿ ನಿಯಮ ಮೀರಿ, ಒತ್ತುವರಿ, ಅಕ್ರಮ, ಗಲಭೆ ಎಂದು ಬುಲ್ಡೋಜರ್ ಬಳಸಿ ಕಟ್ಟಡ ಉರುಳಿಸುತ್ತಿರುವುದರ ವಿರುದ್ಧ ಮೂಲಭೂತ ಹಕ್ಕುಗಳ ಅಡಿ ಕೋರ್ಟ್ ಗಳಲ್ಲಿ ಪ್ರಶ್ನಿಸಲಾಗಿದೆ.

- Advertisement -

“ಇದು ಸಂಪೂರ್ಣವಾಗಿ ಕಾನೂನುಬಾಹಿರ. ನಿಯಮ ಮೀರಿ ಕಟ್ಟಿದ್ದಾದರೂ ಅದಕ್ಕೆ ನೋಟೀಸ್ ಇತ್ಯಾದಿ ಕ್ರಮಗಳಿವೆ. ವ್ಯಕ್ತಿ ಕಸ್ಟಡಿಯಲ್ಲಿರುವಾಗ ಅದೂ ಭಾನುವಾರ ಬಂದು ಕಟ್ಟಡ ಒಡೆಯುವುದು ಕಾನೂನುಬದ್ಧವಲ್ಲ. ಇದು ತಾಂತ್ರಿಕ ಪ್ರಶ್ನೆಯಲ್ಲ, ಇದೊಂದು ಕಾನೂನು ಪ್ರಶ್ನೆ” ಎಂದು ಮಾಜಿ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಹೇಳಿದ್ದಾರೆ.

ಸಿಎಎ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ನೇಮ್ ಆಂಡ್ ಶೇಮ್ ಪೋಸ್ಟರ್ ಗಳನ್ನು ಲಕ್ನೋ ಆಡಳಿತವು ಮಾರ್ಚ್ 8, 2020ರಲ್ಲಿ ಹಚ್ಚಿದಾಗಲೂ ಜಸ್ಟೀಸ್ ಮಾಥುರ್ ಸುಮೋಟೋ ನೋಟಿಸ್ ನೀಡಿದ್ದರು. ಸರಕಾರದ ನಡೆಯು ಕಾನೂನುಬಾಹಿರ ಮತ್ತು ವ್ಯಕ್ತಿಯ ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ.

ಈ ವರ್ಷ ಏಪ್ರಿಲ್ 21ರಂದು ಜಹಾಂಗೀರ್ ಪುರಿಯಲ್ಲಿ ಎನ್ ಎಂಡಿಸಿ- ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಕಟ್ಟಡ ಉರುಳಿಸುವುದಕ್ಕೆ ಸುಪ್ರೀಂ ಕೋರ್ಟು ತಡೆ ನೀಡಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಬುಲ್ಡೋಜರ್ ಹೊರಟಾಗ ಅದು ಗಲಭೆಗೆ ಕಾರಣವಾಗಿತ್ತು. ಜಸ್ಟಿಸ್ ಗಳಾದ ಎಲ್. ನಾಗೇಶ್ವರರಾವ್, ಬಿ. ಆರ್. ಗವಾಯಿ ಅವರಿದ್ದ ಪೀಠವು ಕಾರ್ಯಾಚರಣೆಗೆ ಮೊದಲು ಎಲ್ಲ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿತು.

ರಾವ್ ನಿವೃತ್ತರಾದ ಬಳಿಕ ಪ್ರಕರಣ ವಿಚಾರಣೆಯನ್ನು ಆಗಸ್ಟ್ ಗೆ ಮುಂದೂಡಲಾಗಿದೆ.

ಮನೆಗಳ ಬುಲ್ಡೋಜಿಂಗ್ ಸರಿಯಲ್ಲ, ತಡೆ ನೀಡಬೇಕು ಎಂದು ಸಲ್ಲಿಸಿದ್ದ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಅದೇ ದಿನ ಮಧ್ಯ ಪ್ರದೇಶ ಹೈಕೋರ್ಟ್  ಇದು ಸಾರ್ವಜನಿಕ ಹಿತಾಸಕ್ತಿಯ ವರ್ಗಕ್ಕೆ ಸೇರುವುದಿಲ್ಲ ಎಂದು ವಜಾ ಮಾಡಿತು.

ವ್ಯಕ್ತಿಗತವಾಗಿ ಹಾನಿಗೊಳಗಾದವರು ಸಹ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಅವೆಲ್ಲ ಇನ್ನು ವಿಚಾರಣೆ ಆಗಬೇಕಷ್ಟೆ.

ಹಿಂದೂ ಮಹಿಳೆಯೊಬ್ಬಳನ್ನು ಅಪಹರಿಸಿದ್ದಾರೆ ಎಂಬ ಆರೋಪದಡಿ 22ರ ಪ್ರಾಯದ ಆಸಿಫ್ ಖಾನ್ ಗೆ ಸೇರಿದ ಮನೆ ಮತ್ತು ಮೂರು ಅಂಗಡಿಗಳನ್ನು ಬುಲ್ಡೋಜಿಂಗ್ ಮಾಡಿದ್ದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಮಹಿಳೆ ವಯಸ್ಕರು, ಆ ಅಂತರ ನಂಬಿಕೆಯ ದಂಪತಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಹೈಕೋರ್ಟಿನ ಒಂಟಿ ನ್ಯಾಯಾಧೀಶರ ಪೀಠವು ಹೇಳಿದರು. ಆದರೆ ಸಮಸ್ಯೆ ಬಗೆಹರಿದಿಲ್ಲ.

2020ರಲ್ಲಿ ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟಿಸಿದವರಿಂದ ಹಾನಿ ವಸೂಲಿಗಾಗಿ ಸರಕಾರ ನೋಟಿಸ್ ನೀಡಿದೆ. ಹಲವರ ಆಸ್ತಿ ಮುಟ್ಟುಗೋಲು ಹರಾಜು ಹಾಕಿಕೊಂಡಿತು. ಅಲಹಾಬಾದ್ ಹೈಕೋರ್ಟ್ ಈ ವಿಷಯದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿತು. ಇದು ನಡೆದುದು ಡಿಸೆಂಬರ್ 3, 2020ರಲ್ಲಿ. ಇಲ್ಲಿಯವರೆಗೆ ಯಾರ ಪ್ರಕರಣವೂ ವಿವರವಾಗಿ ವಿಚಾರಣೆ ಆಗಿಲ್ಲ.

ಉತ್ತರ ಪ್ರದೇಶದಲ್ಲಿ ಸಿಎಎ ಪ್ರತಿಭಟನಕಾರರ ಆಸ್ತಿ ಹಿಡಿಯುವಲ್ಲಿ ಅಲಹಾಬಾದ್ ಹೈಕೋರ್ಟಿನ ಆದೇಶ ಪಾಲಿಸಿಲ್ಲ, ಯಾವುದೇ ಕ್ರಮ, ಹೈಕೋರ್ಟ್ ನಿಯಮಾವಳಿ ಪಾಲಿಸಿಲ್ಲ ಎಂದು 2022ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಸಹ ಹೇಳಿತು.

ನಾವು ಈ ಸಂಬಂಧ ನೀಡಿದ ನೋಟೀಸ್ ಗಳನ್ನು ಹಿಂಪಡೆಯುತ್ತೇವೆ. 2020ರ ಹೊಸ ಕಾನೂನಿನಡಿ ಕ್ರಮಪ್ರಕಾರ ವ್ಯವಹರಿಸುತ್ತೇವೆ ಎಂದು ಸುಪ್ರೀಂ ಕೋರ್ಟಿಗೆ ಉತ್ತರ ಪ್ರದೇಶ ಸರಕಾರವು ಲಿಖಿತ ಹೇಳಿಕೆ ನೀಡಿತು. ಹೊಸ ಕಾನೂನನ್ನು ಸಹ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದ್ದು, ಅದಿನ್ನೂ ವಿಚಾರಣೆಗೆ ಬರಬೇಕಾಗಿದೆ.

ಮಧ್ಯಪ್ರದೇಶದ ಖರ್ಗೋನ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆಯನ್ನೇ ಕಟ್ಟಿ ಮುಗಿದ ಬೆನ್ನಿಗೇ ಒತ್ತುವರಿ ಎಂದು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದು ಕಳೆದ ತಿಂಗಳು ವರದಿಯಾಗಿತ್ತು. ಈ ಸಂಬಂಧ ದಾಖಲೆಗಳು, ಬ್ಯಾಂಕು ಪಾವತಿ ಎಲ್ಲ ಇದ್ದರೂ ಮನೆ ಉರುಳಿಸಲಾಗಿದೆ.



Join Whatsapp