ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಗಣಿಸದ ಬಜೆಟ್: SIO

Prasthutha|

- Advertisement -

ಬೆಂಗಳೂರು: ಫೆಬ್ರವರಿ 17 ರ ಶುಕ್ರವಾರದಂದು ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ 2023-24 ರ ರಾಜ್ಯದ ಆಯವ್ಯಯವನ್ನು ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಓದಿದ ಬಜೆಟ್ ಚುನಾವಣಾ ಪ್ರೇರಿತವಾಗಿದ್ದು, ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯಾವುದೇ ವಿಷಯವು ಅದರಲ್ಲಿ ಒಳಗೊಂಡಿಲ್ಲ, ಶಿಕ್ಷಣ ವಲಯಕ್ಕೆ ಸಂಬಂಧಿಸಿದ ಬಹುತೇಕ ಘೋಷಣೆಗಳು ಆಡಳಿತಾತ್ಮಕ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳಾಗಿವೆ ಹೊರತು ವಿದ್ಯಾರ್ಥಿಗಳ ಆಶೋತ್ತರಗಳಿಗೆ ಪೂರಕವಾಗಿಲ್ಲ ಎಂದು SIO ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸರಿಸುಮಾರು 3 ಲಕ್ಷ ಕೋಟಿ ರೂಪಾಯಿಯ ಒಟ್ಟು ಬಜೆಟ್ ಗಾತ್ರದಲ್ಲಿ 12% ದಷ್ಟು ಅಂದರೆ 37960.00 ಕೋಟಿ ರೂಪಾಯಿ ಅನುದಾನವನ್ನು ಶಿಕ್ಷಣ ವಲಯಕ್ಕೆ ಅನುದಾನ ಹಂಚಿಕೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ, ಆದರೆ ಇದು ಶಿಕ್ಷಣ ವ್ಯವಸ್ಥೆ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಮತ್ತು ವಿದ್ಯಾರ್ಥಿಗಳ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ರಾಜ್ಯದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದ ಅಗತ್ಯವಿರುವ ಯೋಜನೆಗಳಿಗೆ ಅನುದಾನವನ್ನು ನೀಡದೆ, ಬಹುತೇಕ ಅನುದಾನವನ್ನು ಆಡಳಿತಾತ್ಮಕ ನಿರ್ವಹಣೆಗಾಗಿ ಮೀಸಲಿರಿಸಿದೆ, ಅದರಲ್ಲೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಕೇಂದ್ರ ಸರ್ಕಾರವು ರದ್ದುಪಡಿಸಿರುವುದರಿಂದ ರಾಜ್ಯದ 7 ಲಕ್ಷಕ್ಕೂ ಅಧಿಕ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ನಿಂದ ವಂಚಿತರಾಗುತ್ತಿದ್ದು ಅವರಿಗೆ ನ್ಯಾಯವಾದ ವಿದ್ಯಾರ್ಥಿ ವೇತನವನ್ನು ನೀಡಲು 115 ಕೋಟಿ ಹೆಚ್ಚುವರಿ ಅನುದಾನದ ಅಗತ್ಯವಿತ್ತು, ಆದರೆ ಬಜೆಟ್ ನಲ್ಲಿ ವಿದ್ಯಾರ್ಥಿಗಳ ಹಕ್ಕಾದ ವಿದ್ಯಾರ್ಥಿವೇತನದ ಬಗ್ಗೆ ಯಾವುದೇ ಘೋಷಣೆ ಮಾಡದಿರುವುದು ವಿದ್ಯಾರ್ಥಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದೆ, ಅಲ್ಪಸಂಖ್ಯಾತರ ಇಲಾಖೆಯ ಅಡಿಯಲ್ಲಿ ಜಾರಿಗೊಳ್ಳುತ್ತಿದ್ದ ಅನೇಕ ವಿದ್ಯಾರ್ಥಿವೇತನ ಮತ್ತು ಉನ್ನತ ಶಿಕ್ಷಣದ ಉತ್ತೇಜನ ನೀಡುವ ಕಾರ್ಯಕ್ರಮಗಳಿಗೆ ನಿರ್ಧಿಷ್ಟವಾಗಿ ಯಾವುದೇ ಅನುದಾನವನ್ನು ನೀಡದೆ ಇರುವುದು ವಿದ್ಯಾರ್ಥಿಗಳಿಗೆ ಅಘಾತ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಕೇವಲ 110 ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹಂಚಿಕೆ ಮಾಡಲಾಗಿದೆ, ಈ ನಿಗಮದ ಮೂಲಕ ಅರಿವು ವಿದ್ಯಾಭ್ಯಾಸ ಶೈಕ್ಷಣಿಕ ಸಾಲದ ಮೂಲ ಸ್ವರೂಪದ ಯೋಜನೆಯನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿತ್ತು ಎಂದು ಮಹಮ್ಮದ್ ಪೀರ್ ಹೇಳಿದ್ದಾರೆ.

ರಾಜ್ಯದ ಏಳು ಜಿಲ್ಲೆಗಳಲ್ಲಿ ಹೊಸದಾಗಿ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿರುವುದು ಕೇವಲ ಹೆಸರಿಗಷ್ಟೇ ಸೀಮಿತವಾಗಲಿದೆ ಏಕೆಂದರೆ ಭಾಷಾ ಆಧಾರಿತವಾಗಿ ಸ್ಥಾಪಿಸಲ್ಪಟ್ಟ ಕರ್ನಾಟಕದ ಅಸ್ಮಿತೆಯನ್ನು ಪ್ರತಿನಿಧಿಸುವ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪ್ರಾತಿನಿಧಿಕ ಸಂಸ್ಥೆಯಾಗಿದೆ, ಕೆಲವು ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ಸಿಗದೇ ಅನೇಕ ರೀತಿಯ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದೆ ಹಾಗೂ ಅಲ್ಲಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಫೆಲೋಶಿಪ್ ಸಿಗದೆ ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಇತ್ತೀಚೆಗೆ ಹೊಸದಾಗಿ ಸ್ಥಾಪಿತವಾದ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಅದರಲ್ಲೂ ರಾಯಚೂರು ವಿವಿ ಮತ್ತು ಇನ್ನಿತರ ವಿವಿಗಳು ಅಗತ್ಯ ಅನುದಾನ ಲಭಿಸದೇ  ಹಾಗೂ ಬಹುತೇಕ ರಾಜ್ಯದ ಎಲ್ಲಾ ವಿವಿಗಳಲ್ಲಿ ಶೇ 50% ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇವೆ ಹಾಗೂ ಅತಿಥಿ ಉಪನ್ಯಾಸಕರ ಮತ್ತು ಹೊರಗುತ್ತಿಗೆ ಆಧಾರದ ನೌಕರರ ಮೇಲೆಯೇ ವಿವಿಗಳು ಅವಲಂಬನೆಯಾಗಿದ್ದು ಇಂತಹ ಸಮಸ್ಯೆಗಳು ಗುರುತಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳದೇ ಇರುವುದರಿಂದ ವಿವಿಗಳು ನಿರ್ಲಕ್ಷ್ಯ ಧೋರಣೆಗೆ ಒಳಗಾಗುತ್ತಿದ್ದು, ರಾಜ್ಯದ ವಿವಿಗಳ ಶೈಕ್ಷಣಿಕ ಪ್ರಗತಿಯು ಇದರಿಂದ ಕುಂಠಿತಗೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕೆಲವು ಜಿಲ್ಲೆಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ 2014-15ರ ಮತ್ತು 2015-16 ಹಾಗೂ 2016-17ರ  ಬಜೆಟ್ ನಲ್ಲಿ ಘೋಷಿಸಿದ್ದ ಕಾಲೇಜುಗಳು ಇದುವರೆಗೂ ಪೂರ್ಣ ರೂಪದಲ್ಲಿ ಕಾರ್ಯಾರಂಭಗೊಳ್ಳದೆ ನೆನೆಗುದಿಗೆ ಬಿದ್ದಿವೆ, ಇದೀಗ ಹೊಸದಾಗಿ ಘೋಷಿಸಿರುವ ವೈದ್ಯಕೀಯ ಕಾಲೇಜುಗಳು ಯಾವುದೇ ಭರವಸೆಯನ್ನು ಮೂಡಿಸಿಲ್ಲ‌. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದ್ದು, ಬಜೆಟ್ ಗಾತ್ರವು ಹೆಚ್ಚಿದ್ದರು ಅಗತ್ಯವಿರುವುದಕ್ಕೆ ಸೂಕ್ತ ಹಂಚಿಕೆ ಮಾಡದೇ ವೈಭವಿಕರಿಸುವ ಪ್ರಯತ್ನವಾಗಿದೆ ಮತ್ತು ಇದು ರಾಜ್ಯಕ್ಕೆ ದೂರದೃಷ್ಟಿ ನೀಡುವ ಬಜೆಟ್ ಅಲ್ಲ, ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ನಿರಾಸಕ್ತಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

Join Whatsapp