ಬೆಂಗಳೂರು: ರಾಜ್ಯದ ಆರ್ಥಿಕ, ಕೈಗಾರಿಕಾಭಿವೃದ್ಧಿ, ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಪೀಣ್ಯ ಕೈಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ 2022-23 ನೇ ಸಾಲಿನ ಮುಂಗಡ ಪತ್ರದಲ್ಲಿ 500 ಕೋಟಿ ರೂಪಾಯಿ ಒದಗಿಸುವಂತೆ ಪೀಣ್ಯ ಕೈಗಾರಿಕಾ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಅವರ ಜತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಗೌರವ ಕಾರ್ಯದರ್ಶಿ ಆರ್. ಶಿವ ಕುಮಾರ್ ನೇತೃತ್ವದ ತಂಡ ಸಣ್ಣ ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತು.
ಕೋವಿಡ್ ಅಲೆಗಳಿಂದ ಪೀಣ್ಯ ಕೈಗಾರಿಕಾ ವಲಯ ತತ್ತರಿಸಿದ್ದು, ಸಾಕಷ್ಟು ಉದ್ಯೋಗಿಗಳು ನಗರ ತೊರೆದಿದ್ದಾರೆ. ಆಗ್ನೇಯ ಏಷ್ಯಾದ 100 ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು, 8.500 ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪೀಣ್ಯ ಒಳಗೊಂಡಿದ್ದು, ವಾರ್ಷಿಕ 20 ಸಾವಿರ ಕೋಟಿ ರೂ ಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. 2,600 ಕೋಟಿ ರೂಗಿಂತ ಹೆಚ್ಚು ಆದಾಯವನ್ನು ಕೇಂದ್ರ ಹಾಗೂ ರಾಜ್ಯದ ಬೊಕ್ಕಸಕ್ಕೆ ನೀಡುತ್ತಿದೆ. ಉಕ್ಕು, ಪ್ಲಾಸ್ಟಿಕ್, ರಾಸಾಯನಿಕಗಳು, ತಾಮ್ರ, ಅಲ್ಯೂಮಿನಿಯಂ, ವಿದ್ಯುನ್ಮಾನ ವಲಯದ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಎಂ.ಎಸ್.ಎಂ.ಇ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದೆ. ಕೂಡಲೇ ಈ ವಸ್ತುಗಳಿಗೆ ಇನ್ಪುಟ್ ತೆರಿಗೆ ಮತ್ತು ಜಿ.ಎಸ್.ಟಿ. ಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದೆ.
ಪೀಣ್ಯ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಬೇಕು. ಕೆಂಗೇರಿ – ಉಲ್ಲಾಳ – ಸುಂಕದಕಟ್ಟೆ – ಪೀಣ್ಯ – ಹೆಬ್ಬಾಳ – ಯಲಹಂಕಕ್ಕೆ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸಬೇಕು. ಪೀಣ್ಯ ವಲಯದಲ್ಲಿ ಹತ್ತು ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಲ್ಲಿ ನಾಲ್ಕು ಲಕ್ಷ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಮೆಟ್ರೋ ರೈಲು ಬಳಕೆ ಮಾಡಲು ಇದರಿಂದ ಸಹಕಾರಿಯಾಗಲಿದ್ದು, ರೈಲು ಸೇವೆ ದೊರೆತರೆ ಪೀಣ್ಯ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ರಸ್ತೆಗಳ ಸುಧಾರಣೆ, ಒಳಚರಂಡಿ ನಿರ್ಮಾಣದ ಜತೆಗೆ ಆಸ್ತಿ ತೆರಿಗೆ ದರ ಇಳಿಸಬೇಕು ಎಂದು ಕೋರಿದೆ.
ವಿದ್ಯುತ್ ಪರಿಷ್ಕರಣೆ ಮಾಡಬಾರದು, ಕ್ರಾಸ್ ಸಬ್ಸಿಡಿಯನ್ನು ಕಡಿಮೆ ಮಾಡಬೇಕು. ಎರಡು ದಶಕಗಳಿಂದ ಒತ್ತಾಸೆಯಾಗಿಯೇ ಉಳಿದಿರುವ “ಪೀಣ್ಯ ಕೈಗಾರಿಕಾ ಪ್ರಾಧಿಕಾರ”ವನ್ನು ಕೂಡಲೇ ಸ್ಥಾಪಿಸಬೇಕು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 2021-22 ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ ಪ್ರಾಧಿಕಾರ ಸ್ಥಾಪನೆಗೆ 100 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಮಾರ್ಚ್ ನಲ್ಲಿ ಮಂಡಿಸಲಿರುವ ಮುಂಗಡ ಪತ್ರದಲ್ಲಿ ಹೆಚ್ಚಿನ ನೆರವು ಮಂಜೂರು ಮಾಡಿ ಶೀಘ್ರ ಪ್ರಾಧಿಕಾರವನ್ನು ಕಾರ್ಯಗತಗೊಳಿಸುವಂತೆ ಮುಖ್ಯಮಂತ್ರಿ ಅವರಿಗೆ ಮುರಳಿ ಕೃಷ್ಣ ಮನವಿ ಮಾಡಿದರು.
ಕೆ.ಎಸ್.ಎಸ್.ಐ.ಡಿ.ಸಿಯಿಂದ ಕಳೆದ 25 ವರ್ಷಗಳಿಂದ ನಿವೇಶನ ಹಂಚಿಕೆ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಕೆ.ಐ.ಎ.ಡಿ.ಬಿ ಮಂಜೂರು ಮಾಡುವ ನಿವೇಶನಗಳಲ್ಲಿ ಸಣ್ಣ, ಮದ್ಯಮ ಉದ್ಯಮ ವಲಯಕ್ಕೆ ಶೇ 30 ರಷ್ಟು ನಿವೇಶನಗಳನ್ನು ಮೀಸಲಿಡಬೇಕು. ಸಣ್ಣ ಕೈಗಾರಿಕೆಗಳು ತೊಂದರೆಯಲ್ಲಿದ್ದು, ರಾಜ್ಯ ಸರ್ಕಾರದ ಸಮಾಧಾನಕರ ಯೋಜನೆಯನ್ನು 2022 ರ ಆಗಸ್ಟ್ ಅಂತ್ಯದ ವರೆಗೆ ವಿಸ್ತರಿಸಬೇಕು. ಪೀಣ್ಯ 2 ನೇ ಹಂತದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಹಾಗೂ ಪೀಣ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.