ಶಿವಮೊಗ್ಗಕ್ಕಿಂದು ಮೊದಲ ವಿಮಾನ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್ವೈ, ಎಂ.ಬಿ ಪಾಟೀಲ್

Prasthutha|

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಸೇವೆ ಇಂದು ಆರಂಭಗೊಂಡಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಎಂ.ಬಿ ಪಾಟೀಲ್, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ, ವಿಜಯೇಂದ್ರ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಇನ್ನೂ ಹಲವರು ರಾಜಕೀಯ ಗಣ್ಯರು ಶಿವಮೊಗ್ಗಕ್ಕೆ ತೆರಳುತ್ತಿರುವ ಮೊದಲ ವಿಮಾನ ಹತ್ತಿ ಸಂತಸಪಟ್ಟರು.

- Advertisement -


ವಿಮಾನ ಹತ್ತುವ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, “ಎಲ್ಲಾ ಗೌರವಗಳು ಇಲ್ಲಿನ ರೈತರಿಗೆ ಸಲ್ಲಬೇಕು. ಯಾವುದೇ ಅಡ್ಡಿ ಆತಂಕಗಳಿಲ್ಲದೆಯೇ ರೈತರು ಜಾಗ ಬಿಟ್ಟು ಕೊಟ್ಟ ಪರಿಣಾಮ ಶೀಘ್ರದಲ್ಲೇ ನಾವು ಏರ್ಪೋರ್ಟ್ ಮಾಡಲು ಸಾಧ್ಯವಾಯಿತು. ನಮಗೆ ಸಹಕಾರ ಕೊಟ್ಟ ಎಲ್ಲಾ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಾವು ವಿಮಾನದಲ್ಲಿ ಇಬ್ಬರು ರೈತರನ್ನು ಕರೆದುಕೊಂಡು ಹೋಗುತ್ತಿದ್ದೇವೆ. ರೈತರ ಆಶೀರ್ವಾದದಿಂದಲೇ ಈ ಕೆಲಸ ಆಗಿದೆ” ಎಂದರು.


ಬಳಿಕ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, “ಶಿವಮೊಗ್ಗಕ್ಕೆ ಮೊದಲ ವಿಮಾನ ಸೇವೆ ಪ್ರಾರಂಭವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು ಶಿವಮೊಗ್ಗ ಆಗಿರುವುದರಿಂದ ಕುವೆಂಪು ವಿಮಾನ ನಿಲ್ದಾಣವೆಂದೇ ಹೆಸರಿಟ್ಟಿದ್ದೇವೆ. ಒಟ್ಟಾರೆಯಾಗಿ ಇದೊಂದು ಐತಿಹಾಸಿಕ ಕ್ಷಣ. ವಿಮಾನ ಆರಂಭದಿಂದ ಮಧ್ಯ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ” ಎಂದು ನುಡಿದರು.



Join Whatsapp