ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಿರೋಧಿಸಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿರೋಮಣಿ ಅಕಾಲಿ ದಳ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಗೆ 20 ಸ್ಥಾನಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಪಂಜಾಬ್ ವಿಧಾನಸಭೆಯ 117 ಸ್ಥಾನಗಳಲ್ಲಿ ಉಳಿದ 97 ಸ್ಥಾನಗಳಿಗೆ ಶಿರೋಮಣಿ ಅಕಾಲಿ ದಳ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಪಂಜಾಬ್ ನ ಹಳೆಯ ಪಕ್ಷವಾದ ಎಸ್ ಎಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಹಲವು ಬಾರಿ ಬಿಜೆಪಿಯೊಂದಿಗೆ ಅಧಿಕಾರ ನಡೆಸಿದೆ. ಆದರೆ, ಇತ್ತೀಚೆಗೆ ಕೇಂದ್ರ ಸರಕಾರ ತಂದಿರುವ ವಿವಾದಾತ್ಮಕ ಕಾನೂನುಗಳು ಮತ್ತು ಮೋದಿ ಸರಕಾರದ ಪಂಜಾಬಿ ಮತ್ತು ಸಿಖ್ ವಿರೋಧಿ ನಿಲುವುಗಳನ್ನು ವಿರೋಧಿಸಿ ಎಸ್ ಎಡಿ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ತೊರೆದಿದೆ.