ಲಕ್ನೋ: ಮುಂಬರುವ ಪಂಚರಾಜ್ಯ ಚುನಾವಣೆಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದ್ದು, ಪಕ್ಷಾಂತರ ಪರ್ವ, ಟಿಕೆಟ್’ಗಾಗಿ ಲಾಬಿ ಜೋರಾಗಿದೆ.
ಈ ನಡುವೆ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಬಹುಜನ ಸಮಾಜ ಪಕ್ಷದ -ಬಿಎಸ್ಪಿ ಪಕ್ಷದ ನಾಯಕರೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಜಫರ್ ನಗರದ ಚಾರ್ತಾವಾಲ್ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದ ಅರ್ಷಾದ್ ರಾಣಾಗೆ ಟಿಕೆಟ್ ಕೈತಪ್ಪಿದೆ. ಇದರಿಂದ ತೀವ್ರ ನಿರಾಸೆಗೊಳಗಾಗಿರುವ ರಾಣಾ, ಬೇರೆಯವರಿಗೆ ಟಿಕೆಟ್ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, BSP ಪಕ್ಷದ ಹಿರಿಯ ಮುಖಂಡರೊಬ್ಬರು ಟಿಕೆಟ್ ನೀಡುವುದಾಗಿ ಮಾತುಕೊಟ್ಟು ತನ್ನಿಂದ 67 ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ರಾಣಾ ಆರೋಪಿಸಿದ್ದು, ಹಣ ಮರಳಿಸುವಂತೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಾರ್ತಾವಾಲ್ ವಿಧಾನಸಭಾ ಕ್ಷೇತ್ರದಿಂದ ಸಲ್ಮಾನ್ ಸಯೀದ್’ರನ್ನು ಕಣಕ್ಕಿಳಿಸಿರುವುದಾಗಿ ಬಿಎಸ್ ಪಿ ವರಿಷ್ಠೆ ಮಾಯಾವತಿ ಘೋಷಿಸಿದ್ದಾರೆ. ಸಲ್ಮಾನ್ ಸಯೀದ್ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಸಯೀದ್ ಅಜ್ಮಾನ್ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ.