ತಿರುವನಂತಪುರಂ: ಬಿಸ್ಕತ್ತು ಪೊಟ್ಟಣದ ತೂಕ ಕಡಿಮೆ ಇದ್ದಿದ್ದಕ್ಕಾಗಿ ಗ್ರಾಹಕನಿಗೆ 50 ಸಾವಿರ ಪರಿಹಾರ ನೀಡುವಂತೆ ಬ್ರಿಟಾನಿಯಾ ಕಂಪೆನಿಗೆ ಕೇರಳದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತ್ರಿಶ್ಶೂರು ಶಾಖೆ ಸೂಚಿಸಿದ ಘಟನೆ ನಡೆದಿದೆ. ಮೊತ್ತವಲ್ಲದೆ, ವ್ಯಾಜ್ಯದ ವೆಚ್ಚವಾಗಿ ಗ್ರಾಹಕನಿಗೆ 10 ಸಾವಿರ ರೂ. ನೀಡುವಂತೆಯೂ ಕಂಪನಿ ಹಾಗೂ ಬಿಸ್ಕತ್ತು ಮಾರಾಟ ಮಾಡಿದ ವರ್ತಕನಿಗೆ ಆಯೋಗ ಆದೇಶಿಸಿದೆ.
ತ್ರಿಶ್ಶೂರಿನ ಜಾರ್ಜ್ ಥಟ್ಟಿಲ್ ಎಂಬುವವರು ಈ ಕುರಿತು ಬ್ರಿಟಾನಿಯಾ ಇಂಡಸ್ಟ್ರೀಸ್ ಹಾಗೂ ತಾವು ಬಿಸ್ಕತ್ತು ಪೊಟ್ಟಣ ಖರೀದಿಸಿದ್ದ ಸ್ಥಳೀಯ ಬೇಕರಿ ವಿರುದ್ದ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ಜಾರ್ಜ್ ಅವರು ತ್ರಿಶ್ಶೂರಿನ ಕುರುವಪಾಡಿ ಪ್ರದೇಶದಲ್ಲಿರುವ ಚುಕ್ಕಿರಿ ರಾಯಲ್ ಬೇಕರಿಯಲ್ಲಿ ‘ಬ್ರಿಟಾನಿಯಾ ನ್ಯೂಟ್ರಿ ಚಾಯ್ಸ್ ಥಿನ್ ಆಯರೊ ರೂಟ್’ ಬಿಸ್ಕತ್ತಿನ ಎರಡು ಪೊಟ್ಟಣಗಳನ್ನು 2019ರ ಡಿಸೆಂಬರ್ 4ರಂದು ಖರೀದಿಸಿದ್ದರು. ಇದಕ್ಕೆ ಅವರು ₹40 ಪಾವತಿಸಿದ್ದರು.
ಪ್ರತಿ ಪೊಟ್ಟಣದ ತೂಕ 300 ಗ್ರಾಮ ಇರಬೇಕಿತ್ತು. ಆದರೆ, ಒಂದು ಪೊಟ್ಟಣದ ತೂಕ 268 ಗ್ರಾಂ ಹಾಗೂ ಮತ್ತೊಂದರ ತೂಕ 249 ಗ್ರಾಂ ಇತ್ತು. ಈ ಕಾರಣಕ್ಕೆ ಜಾರ್ಜ್ ಅವರು ಆಯೋಗಕ್ಕೆ ದೂರು ನೀಡಿದ್ದರು.
‘ಕಡಿಮೆ ತೂಕವಿರುವ ಬಿಸ್ಕತ್ತು ಪೊಟ್ಟಣ ನೀಡಿರುವುದರಿಂದ ಗ್ರಾಹಕನ ಗೌರವ ಹಾಗೂ ಹಕ್ಕುಗಳಿಗೆ ಧಕ್ಕೆಯಾಗಿದೆ’ ಎಂದು ಜಾರ್ಜ್ ಪರ ವಕೀಲ ಎ.ಡಿ.ಬೆನ್ನಿ ವಾದಿಸಿದ್ದರು.
ಈ ಕುರಿತು, ತಾನು ನೀಡಿದ್ದ ನೋಟಿಸ್‌ಗಳಿಗೆ ಬ್ರಿಟಾನಿಯಾ ಕಂಪನಿ ಹಾಗೂ ಬೇಕರಿ ಮಾಲೀಕ ಪ್ರತಿಕ್ರಿಯೆ ನೀಡದ ಕಾರಣ, ಆಯೋಗವು ಈ ಏಕಪಕ್ಷೀಯ ಆದೇಶ ಪ್ರಕಟಿಸಿದೆ