ಬಂಟ್ವಾಳ: ಇಲ್ಲಿನ ಪುರಸಭೆಯ 2 ನೇ ಅವಧಿಗೆ ಉಪಾಧ್ಯಕ್ಷರಾಗಿ ಚುನಾಯಿತರಾದ ಮೂನಿಶ್ ಅಲಿಯವರನ್ನು ಪತ್ರಿಕಾ ಗೋಷ್ಠಿಯೊಂದರಲ್ಲಿ ದ.ಕ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ದುರುದ್ದೇಶಪೂರಕವಾಗಿ ಗುರಿಪಡಿಸಿ ಇಲ್ಲಸಲ್ಲದ ಸುಳ್ಳಾರೋಪವನ್ನು ಹೊರಿಸಿ ತಮ್ಮ ರಾಜಕೀಯ ದಿವಾಳಿತನವನ್ನು ತೋರ್ಪಡಿಸಿದ್ದಾರೆ ಎಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ಪತ್ರಿಕಾ ಪ್ರಕಟನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಪಕ್ಷದ ಅಮಾಯಕ ಕಾರ್ಯಕರ್ತರ ಮೇಲೆ ಅನ್ಯಾಯವಾಗಿ ದಾಖಲಾದ ಪ್ರಕರಣವನ್ನು ಮತ್ತು ಅಕ್ರಮವಾಗಿ ಬಂಧಿಸಿದ್ದನ್ನು ಖಂಡಿಸಿದ ಕಾರಣಕ್ಕೆ ಮೂನಿಷ್ ಆಲಿ ಒಳಗೊಂಡು ಹಲವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪೊಲೀಸ್ ಸ್ಟೇಷನ್ ಗೆ ದಾಳಿ ಮಾಡುವ ಕಾರ್ಯಕರ್ತರು, ಮತ್ತು ನಾಯಕರು ನಮ್ಮ ಪಕ್ಷದಲ್ಲಿಲ್ಲ. ಚೌಟರ ಪಕ್ಷದ ಕರಾಳ ಇತಿಹಾಸದ ಪುಟಗಳು ತೆರೆದರೆ ಎಷ್ಟು ಗುಂಪು ಹತ್ಯೆಗಳು, ದೊಂಬಿ ಗಲಭೆಗಳು, ಅತ್ಯಾಚಾರ ಪ್ರಕರಣಗಳು, ಭ್ರಷ್ಟಾಚಾರ ಪ್ರಕರಣಗಳು, ಪ್ರಚೋದನಾತ್ಮಕ ಕೋಮುಗಲಭೆಗಳು ಎಳೆ ಎಳೆಯಂತೆ ಇಲ್ಲಿನ ಜನತೆಗೆ ತೆರೆದಿಡಲು ಸಾಧ್ಯವಿದೆ ಎಂಬ ಅಸಲಿಯೊಂದನ್ನು ಬ್ರಿಜೇಶ್ ಚೌಟ ತಿಳಿದುಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಇವತ್ತು ರಾಜ್ಯದಲ್ಲಿ ಬಿಜೆಪಿ ನೆಲೆ ಇಲ್ಲದ ಪರಿಸ್ಥಿತಿ ಇದ್ದು ಅದರ ನಾಯಕರು ಯಾವ ಕ್ಷಣದಲ್ಲಿ ಬೇಕಾದರೂ ಜೈಲು ಸೇರುತ್ತಾರೋ ಎನ್ನೋದರ ಬಗ್ಗೆ ಭಯಭೀತರಾಗಿ ಹೇಳಿಕೆ ಕೊಡುತ್ತಿದ್ದು ಮೂನಿಶ್ ಅಲಿಯವರ ಬಗ್ಗೆ ಇಲ್ಲ ಸಲ್ಲದ ಆರೋಪದಲ್ಲಿ ತೊಡಗಿದ್ದಾರೆ. ಈ ಸಮಾಜದ ಶೋಷಿತರ, ದಮನಿತರ ಪರ ಧ್ವನಿಯಾಗಿ, ಸಮಾಜಮುಖಿ ಕೆಲಸಗಳಲ್ಲಿ ಸದಾ ನಿರತರಾಗಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಮೂನಿಷ್ ಅಲಿ ಕುರಿತು ಬ್ರಿಜೇಶ್ ಚೌಟ ಅರಿಯುವಂತದ್ದು ಇನ್ನೂ ತುಂಬಾ ಇದೆ ಎಂದು ಬ್ರಿಜೇಶ್ ಚೌಟರನ್ನು ಖಲಂದರ್ ಟೀಕಿಸಿದ್ದಾರೆ.
ಇಂತಹ ದ್ವೇಷ ಪೂರಿತ ಹೇಳಿಕೆಗಳು ಮತ್ತು ಇಲ್ಲ ಸಲ್ಲದ ಸುಳ್ಳಾರೋಪಗಳು ಬಿಜೆಪಿಗರಿಂದ ಇದು ಮೊದಲಲ್ಲ. ಬ್ರಿಜೇಶ್ ಚೌಟರ ಈ ನಡೆಯನ್ನು ಎಸ್ ಡಿ ಪಿ ಐ ತೀವ್ರವಾಗಿ ಖಂಡಿಸುತ್ತದೆ ಎಂದು ಖಲಂದರ್ ಪರ್ತಿಪಾಡಿ ತಿಳಿಸಿದ್ದಾರೆ.