ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬೆಂಬಲದ ಅಭ್ಯರ್ಥಿ, ಡಬ್ಲ್ಯುಎಫ್ಐನ ಉನ್ನತ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇದರ ಬೆನ್ನಲ್ಲೇ ಒಲಿಂಪಿಕ್ ಪದಕ ವಿಜೇತೆ ಮತ್ತು ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ಕ್ರೀಡೆಯನ್ನೇ ತೊರೆಯುವುದಾಗಿ ನಿರ್ಧರಿಸಿದ್ದಾರೆ.
ಬ್ರಿಜ್ ಭೂಷನ್ ಶರಣ್ ಸಿಂಗ್ ಅವರ ಬಹುಕಾಲ ಸಹಾಯಕ ಸಂಜಯ್ ಸಿಂಗ್ ಡಬ್ಲ್ಯುಎಫ್ಐನ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಬ್ರಿಜ್ ಭೂಷಣ್ ಅವರು 12 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. ಉತ್ತರ ಪ್ರದೇಶದ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಭಾರಿ ಪ್ರತಿಭಟನೆಯೇ ನಡೆದಿತ್ತು.
ಇಂದು ನಡೆದ ಚುನಾವಣೆಯಲ್ಲಿ ಬ್ರಿಜ್ ಆಪ್ತ ಸಂಜಯ್ ಸಿಂಗ್ 47 ರಲ್ಲಿ 40 ಮತಗಳನ್ನು ಗಳಿಸಿ ವಿಜಯಶಾಲಿಯಾಗಿದ್ದಾರೆ. ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಕೇವಲ 7 ಮತಗಳನ್ನು ಮಾತ್ರ ಗಳಿಸಿದ್ದಾರೆ.
ಚುನಾವಣಾ ಫಲಿತಾಂಶದ ಮೇಲೆ ದೇಶದ ಪ್ರಮುಖ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಮತ್ತು ಭಜರಂಗ್ ಪೂನಿಯಾ ಅಸಮಾಧಾನ ಹೊರಹಾಕಿದ್ದಾರೆ.
ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಕಣ್ಣೀರಾಗಿದ್ದಾರೆ. ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಇದೀಗ ಸಂಜಯ್ ಸಿಂಗ್ ಆಯ್ಕೆಯಾಗಿದ್ದು, ಮಹಿಳಾ ಕುಸ್ತಿಪಟಿಗಳ ಮೇಲಿನ ಲೈಂಗಿಕ ಕಿರುಕುಳ ಮುಂದುವರೆಯಲಿದೆ ಎಂದರಲ್ಲದೆ, ದೇಶದಲ್ಲಿ ಹೇಗೆ ನ್ಯಾಯವನ್ನು ಹುಡುಕಿಕೊಳ್ಳಬೇಕು ಎಂಬುದರ ಸುಳಿವು ಇಲ್ಲ. ನಮ್ಮ ಕುಸ್ತಿ ವೃತ್ತಿಯ ಭವಿಷ್ಯ ಕತ್ತಲಲ್ಲಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕುಸ್ತಿ ಒಕ್ಕೂಟವೂ ಮಹಿಳಾ ಮುಖ್ಯಸ್ಥರನ್ನು ಪಡೆಯಬೇಕೆಂದು ನಾವು ಬಯಸಿದ್ದೆವು. ಆದರೆ, ಅದು ಸಂಭವಿಸಲಿಲ್ಲ. ಇದಕ್ಕಾಗಿ ನಾವು ತುಂಬಾ ಹೋರಾಡಿದೆವು. ಆದರೆ, ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಬ್ರಿಜ್ ಭೂಷಣ್ ಅವರ ಸಹಾಯಕರಾಗಿದ್ದಾರೆ ಮತ್ತು ವ್ಯಾಪಾರದಲ್ಲಿ ಪಾಲುದಾರರಾಗಿದ್ದರೆ. ಹೀಗಾಗಿ ನಾನು ಕುಸ್ತಿಯನ್ನು ತ್ಯಜಿಸುತ್ತೇನೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ತಮ್ಮ ಬೂಟುಗಳನ್ನು ಮೇಜಿನ ಮೇಲೆ ಇರಿಸಿ ನೋವಿನ ಮಾತುಗಳನ್ನಾಡಿದ್ದಾರೆ.