ಔರಾಯ; ವಿವಾಹ ಕಾರ್ಯಕ್ರಮದಲ್ಲಿ ವಧು-ವರರು ಪರಸ್ಪರ ಹೂಮಾಲೆ ಬದಲಾಯಿಸುವ ಸಮಯದಲ್ಲಿ ವರನು ತೋರಿದ “ಸಣ್ಣ ತಮಾಷೆ”ಯಿಂದಾಗಿ ವಿವಾಹವೇ ರದ್ದಾಗಿರುವ ಘಟನೆ ಉತ್ತರಪ್ರದೇಶದ ಔರಾಯ ಜಿಲ್ಲೆಯ ನವೀನ್ ಬಸ್ತಿ ಎಂಬಲ್ಲಿ ನಡೆದಿದೆ.
ಔರಾಯ ಜಿಲ್ಲೆಯ ಬಿಧುನಾ ಪೊಲೀಸ್ ಠಾಣಾ ವ್ಯಾಪ್ತಿಯ ನವೀನ್ ಬಸ್ತಿ ಎಂಬಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ವರನು ವಧುವಿಗೆ ಹೂವಿನ ಹಾರವನ್ನು ತೊಡಿಸಬೇಕಿತ್ತು. ಆದರೆ ವಧುವಿನ ಎದುರಲ್ಲಿ ನಿಂತು ಹಾರ ತೊಡಿಸುವ ಬದಲು, ವರ ತುಸು ದೂರದಿಂದ ಹೂವಿನ ಹಾರವನ್ನು ವಧುವಿನತ್ತ ಎಸೆದಿದ್ದಾನೆ. ಇದರಿಂದ ಕೋಪಗೊಂಡ ವಧು ಕೂಡಲೇ ಮದುವೆಯನ್ನು ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾಳೆ. ತಮಾಷೆಯಾಗಿ ಮಾಡಿದ ಕಾರ್ಯದಿಂದ ಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದುದನ್ನು ಅರಿತ ವರ ವಧುವಿನ ಕುಟುಂಬದವರ ಬಳಿ ಕ್ಷಮೆ ಕೇಳಿದ್ದಾನೆ. ಆದರೆ ವಧು ತನ್ನ ನಿರ್ಧಾರ ಬದಲಾಯಿಸಲಿಲ್ಲ.
ಈ ವೇಳೆ ಎರಡೂ ಕುಟುಂಬದವರ ನಡುವೆ ಜಗಳ ಆರಂಭವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಸಂಧಾನ ಮಾಡುವ ಪ್ರಯತ್ನ ಮಾಡಿದರಾದರೂ ಫಲ ನೀಡಲಿಲ್ಲ. ಕೊನೆಗೆ ಮದುವೆ ರದ್ದಾಯಿತು. ಎರಡೂ ಕುಟುಂಬದವರು ಪರಸ್ಪರ ನೀಡಿದ್ದ ಉಡುಗೊರೆಗಳನ್ನು ಮರಳಿಸಿ ಮಂಟಪದಿಂದ ಹೊರನಡೆದರು.