ಪಟಾಕಿ ಸಿಡಿದು ಬಾಲಕನಿಗೆ ಗಾಯ

Prasthutha|

ಬೆಂಗಳೂರು: ಪಟಾಕಿ ಸಿಡಿಸುವಾಗ ರಾಕೆಟ್ ಪಟಾಕಿ ಸ್ಫೋಟಗೊಂಡು 10 ವರ್ಷದ ಬಾಲಕನೊಬ್ಬನ ಮುಖ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ.

- Advertisement -

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಗರದಲ್ಲಿ ಸಿಡಿಸಿದ ಪಟಾಕಿಯಿಂದ ಈವರೆಗೂ ಮಕ್ಕಳು ಸೇರಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸೋಮವಾರ ನರಕಚತುದರ್ಶಿ ದಿನದಂದು ಪಟಾಕಿ ಸಿಡಿಸುವ ವೇಳೆ ಉಂಟಾದ ಅವಘಡದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ನಾರಾಯಣ ನೇತ್ರಾಲಯದಲ್ಲಿ ತಲಾ ಇಬ್ಬರಂತೆ ನಾಲ್ವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಹಬ್ಬಕ್ಕೂ ಮುನ್ನಾದಿನ ಭಾನುವಾರ ಮೂವರು ಗಾಯಗೊಂಡಿದ್ದರು. ಇವರಲ್ಲಿ ಇಬ್ಬರು ಮಿಂಟೋದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಜೆ.ಪಿ. ನಗರದ 10 ವರ್ಷದ ಬಾಲಕನ ಮುಖ ಸಂಪೂರ್ಣ ಸುಟ್ಟುಹೋಗಿದ್ದು, ಕಣ್ಣಿಗೂ ಹಾನಿಯಾಗಿದೆ. ಬಾಲಕನಿಗೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಆಂಧ್ರ ಪ್ರದೇಶದ ಅನಂತಪುರ ಮೂಲದ 20 ವರ್ಷದ ಯುವಕ ದಾರಿಯಲ್ಲಿ ಹೋಗುತ್ತಿರುವ ವೇಳೆ ಯಾರೋ ಸಿಡಿಸಿದ ಪಟಾಕಿಯಿಂದ ಹೊರಹೊಮ್ಮಿದ ಬೆಂಕಿಯ ಕಿಡಿ ಕಣ್ಣಿಗೆ ತಾಗಿ ಗಂಭೀರವಾಗಿ ಹಾನಿಯಾಗಿದೆ. ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Join Whatsapp