ಜೈಪುರ: ಆಟವಾಡುತ್ತಿದ್ದ 4 ವರ್ಷದ ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್ ಜೀ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜರ್ನಿಯಾ ಕಿ ಧನಿ ಎಂಬ ಗ್ರಾಮದಲ್ಲಿನಡೆದಿದೆ.
ಗುರುವಾರ ಮಧ್ಯಾಹ್ನ 3 ಗಂಟೆ ಯ ಹೊತ್ತಿಗೆ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಕೂಡಲೇಗಾಬರಿ ಗೊಂಡ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೋಲೀಸರ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಅಥವಾ ಎನ್‌ಡಿಆರ್‌ಎಫ್ ಟೀಂ ಸತತ 26 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾಲಕನನ್ನು ಸಾವಿನಿಂದ ಪಾರಿ ಮಾಡಿದೆ.
ಸುಮಾರು 50 ಅಡಿ ಆಳದಲ್ಲಿದ್ದ ಬಾಲಕನ ಬಗ್ಗೆ ಕ್ಯಾಮೆರಾದ ಮೂಲಕ ನಿರಂತರವಾಗಿ ನಿಗಾ ಇರಿಸಲಾಗಿತ್ತು. ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುರಂಗವನ್ನು ಅಗೆಯುವ ಮೂಲಕ ರಕ್ಷಣಾ ತಂಡವು ಬಾಲಕನನ್ನು ಹೊರತೆಗೆಯಲು ಹರಸಾಹಸ ಪಟ್ಟಿದೆ. ಬಾಲಕನಿಗೆ ಹಗ್ಗ, ಬಲೆ ಇತ್ಯಾದಿಗಳನ್ನು ಇಳಿಸಿ ಅದನ್ನು ಹಿಡಿದುಕೊಳ್ಳಲು ಹೇಳಲಾಗುತ್ತಿತ್ತು. ಆದರೆ ಮೇಲಿನಿಂದ ಹೇಳಿದ ಸೂಚನೆ ಆತನಿಗೆ ಅರ್ಥವಾಗದೇ ಇದ್ದುದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಸುಮಾರು ಹನ್ನೆರಡು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸಿ ಪೈಪ್ ಮೂಲಕ ಆಮ್ಲಜನಕ ಮತ್ತು ಹಗ್ಗದ ಸಹಾಯದಿಂದ ನೀರು, ಹಾಲು, ಬಿಸ್ಕೆಟ್‌ಗಳನ್ನು ಸಹ ನೀಡಲಾಯಿತು.
ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಾಲಕ ಆರೋಗ್ಯವಾಗಿದ್ದಾನೆ ಎಂದು ಸಿಕಾರ್ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ರಾಷ್ಟ್ರದೀಪ್ ತಿಳಿಸಿದ್ದಾರೆ.