ಮಂಡ್ಯ: ಹೆಚ್.ಡಿ. ಕುಮಾರಸ್ವಾಮಿ ಅವರು ಹುಟ್ಡಿದ್ದು ಹಾಸನದಲ್ಲಿ. ರಾಜಕೀಯವಾಗಿ ಬೆಳೆದಿದ್ದು ರಾಮನಗರದಲ್ಲಿ. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಸ್ಪರ್ಧಿಸಿದಾಗ ಇದು ನಮ್ಮ ಭೂಮಿ ಎಂದಿದ್ದರು. ಈಗ ಮಂಡ್ಯಗೆ ಬಂದು, ಇದು ನಮ್ಮ ಭೂಮಿ ಅಂತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯನ್ನು ಯಾರು ಯಾವ ರೀತಿ ಬೇಕಾದ್ರು ಮಾತಾಡಬಹುದು. ನಾವು ನಮ್ಮ ಅಭಿವೃದ್ಧಿ, ನಮ್ಮ ಗ್ಯಾರಂಟಿ ಯೋಜನೆ ಇಟ್ಟುಕೊಂಡು ಚುನಾವಣೆ ಮಾಡ್ತಾ ಇದ್ದೀವಿ. ಇದು ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರ ನಡುವಿನ ಚುನಾವಣೆ ಅಲ್ಲ. ಇದು ನಮ್ಮ ಅಭಿವೃದ್ಧಿಯ ಚುನಾವಣೆಯಾಗಿದೆ ಎಂದರು.
ನಾವು ಮಂಡ್ಯ ಬಿಟ್ಟು ಎಲ್ಲೂ ಹೋಗಿಲ್ಲ. ಮಂಡ್ಯದಲ್ಲೇ ಹುಟ್ಟಿದ್ದು, ಮಂಡ್ಯದಲ್ಲೇ ಸಾಯೋದು. ಮಂಡ್ಯ ಜನರು ಭಾವನಾತ್ಮಕ ಜೀವಿಗಳು. ಭಾವನೆಗಳಿಗೆ ಕೆರಳಿ ಮತ ಹಾಕಲ್ಲ ಇಲ್ಲಿನ ಜನ. ಕೋಮು ವಿಚಾರಕ್ಕೆ ಪ್ರಯೋಧನೆ ಆಗಿ ಮತ ಹಾಕಲ್ಲ. ಮಂಡ್ಯದವರಿಗೆ ನಮ್ಮವರು ಎನ್ನಿಸಿದವರಿಗೆ ಮತ ಹಾಕುತ್ತಾರೆ. ಸ್ಟಾರ್ ಚಂದ್ರು ಮಂಡ್ಯ ಮಣ್ಣಿನ ಮನೆಯವರು. ಮಂಡ್ಯ ಜನರು ಸ್ಟಾರ್ ಚಂದ್ರು ಅವರ ಕೈ ಹಿಡಿಯುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.