ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಪಾರ್ಟಿಗೇಟ್ ಹಗರಣಕ್ಕೆ ಸಂಬಂಧಿಸಿ ಬಲವಂತದಿಂದ ತಾವು ರಾಜೀನಾಮೆ ನೀಡುವಂತೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಸಂತೋಷಕೂಟಗಳನ್ನು ಆಯೋಜಿಸಿದ್ದ ಬಗ್ಗೆ ಜಾನ್ಸನ್ ಅವರು ಸಂಸತ್ ಗೆ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪ ಅವರ ಮೇಲಿದೆ. ಇದು ಪಾರ್ಟಿಗೇಟ್ ಹಗರಣ ಎಂಬ ಹೆಸರಿನಲ್ಲಿ ಬ್ರಿಟನ್ ನಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಪಾರ್ಟಿಗೇಟ್ ಹಗರಣದಲ್ಲಿ ಈಗಾಗಲೇ ಜಾನ್ಸನ್ ವಿರುದ್ಧ ಸಂಸದೀಯ ಸಮಿತಿ ವರದಿ ಸಲ್ಲಿಸಿದ್ದು, ಅವರು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ವರದಿ ಬಿಡುಗಡೆಗೂ ಮೊದಲೇ ಜಾನ್ಸನ್ ಅವರು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ನಾನು ಎಲ್ಲಿಯೂ ಸುಳ್ಳು ಹೇಳಿಲ್ಲ. ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ದೂರಿದ್ದಾರೆ.