ಹುಬ್ಬಳ್ಳಿ: ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದುಹೋಗಿರುವ ಅಧ್ಯಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವ ಬಗ್ಗೆ ತಿಳಿದ ಸಂದರ್ಭದಲ್ಲಿ ಲಿಖಿತವಾಗಿ ಈಗಿರುವ ವಾತಾವರಣದಲ್ಲಿ ಭೇಟಿ ನೀಡುವುದು ಬೇಡ. ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದಾಗ್ಯೂ ಕೂಡ ಅವರು ಬರುವುದಾಗಿ ತಿಳಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಮತ್ತೊಮ್ಮೆ ಮಹಾರಾಷ್ಟ್ರ ಸಿಎಂ ಜೊತೆ ಮಾತುಕತೆ :
ಮಹಾರಾಷ್ಟ್ರ ಹಾಗೂ ಕರ್ನಾಟಕದ ಜನರ ಮಧ್ಯೆ ಸಾಮರಸ್ಯವಿದೆ. ಅದೇ ಸಂದರ್ಭದಲ್ಲಿ ಗಡಿ ವಿವಾದವೂ ಇದೆ. ಆದರೆ ಮಹಾರಾಷ್ಟ್ರ ಕ್ಯಾತೆ ತೆಗೆದು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಈಗಿನ ಸಂದರ್ಭದಲ್ಲಿ ಪ್ರವಾಸ ಮಾಡುವುದು ಪ್ರಚೋದನಕಾರಿ ಕೆಲಸ. ಜನರಲ್ಲಿ ಭಾವನೆಗಳನ್ನು ಕೆರಳಿಸುವ ಕೆಲಸವಾಗುತ್ತದೆ. ಮತ್ತೊಮ್ಮೆ ಮಹಾರಾಷ್ಟ್ರ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಸೂಕ್ತ ಕ್ರಮ ಕೈಗೊಳ್ಳಲು ಹಿಂದು ಮುಂದೆ ನೋಡುವುದಿಲ್ಲ :
ಅಕಸ್ಮಾತ್ ಬರುವ ಸಾಹಸ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದರು. ಹಿಂದೆ ಇಂಥ ಸಂದರ್ಭಗಳಾದ ಸಂದರ್ಭದಲ್ಲಿ ಏನು ಕ್ರಮ ತೆಗೆದುಕೊಂಡಿದ್ದರೋ ಅದೇ ರೀತಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನಮ್ಮ ಗುರಿ :
ಪ್ರತ್ಯೇಕ ಮುಸ್ಲಿಂ ಶಾಲೆ ಜೊತೆಗೆ ಪ್ರತ್ಯೇಕ ಕೇಸರಿ ಶಾಲೆಗಳನ್ನು ತೆರೆಯಲು ಒತ್ತಾಯ ಕೇಳಿ ಬಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮೊದಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.