ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಕಂಡ ಬಳಿಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ.
ಭಾನುವಾರ (ಆಗಸ್ಟ್ 06) ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗಿರುವ ಬಸವರಾಜ ಬೊಮ್ಮಾಯಿ, ಇಂದು (ಆಗಸ್ಟ್ 07) ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕನ ಆಯ್ಕೆ ಕಗ್ಗಂಟು ನಡುವೆ ಬೊಮ್ಮಾಯಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನವನ್ನು ಸಿಟಿ ರವಿ ಅವರಿಗೆ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಹೀಗಾಗಿ ಇತರೆ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ಖುದ್ದು ಹೈಕಮಾಂಡ್ ಸಿಟಿ ರವಿ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಸುದೀರ್ಘವಾಗಿ ಚರ್ಚೆ ಮಾಡಿದೆ. ಮೂಲಗಳ ಪ್ರಕಾರ ಸಿಟಿ ರವಿ ಅವರೇ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗುವುದು ಬಹುತೇಕ ಫೈನಲ್ ಆಗಿದ್ದು, ಹೈಕಮಾಂಡ್ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದರ ಬೆನ್ನಲ್ಲೇ ಇದೀಗ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಹೈಕಮಾಂಡ್ ಚರ್ಚೆಗೆ ಮುಂದಾಗಿದೆ. ವಿಪಕ್ಷ ನಾಯಕ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಸವರಾಜ ಬೊಮ್ಮಾಯಿ ಹೆಸರು ಬಲವಾಗಿ ಕೇಳಿಬಂದಿದ್ದು, ಈ ಇಬ್ಬರಲ್ಲಿ ಯಾರನ್ನು ಮಾಡಿದ್ರೆ ಸೂಕ್ತ ಎನ್ನುವ ಲೆಕ್ಕಾಚಾರವನ್ನು ಹಾಕುತ್ತಿದೆ. ಇದರ ಮಧ್ಯೆ ಬೊಮ್ಮಾಯಿ, ದೆಹಲಿ ಭೇಟಿ ಸಂಚಲನಕ್ಕೆ ಕಾರಣವಾಗಿದೆ.
ಆಪ್ತ ಮೂಲಗಳ ಪ್ರಕಾರ ವರಿಷ್ಠರ ಆಹ್ವಾನದ ಮೇರೆಗೆ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಇಂದು ಮೊದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ನಂತರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದು,. ವಿಪಕ್ಷ ನಾಯಕನ ಆಯ್ಕೆ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೇ ಮುಂದಿನ ಲೋಕಸಭಾ ಚುನಾವಣೆ ಸಂಬಂಧ ಸದ್ಯ ರಾಜ್ಯದಲ್ಲಿ ರಾಜಕೀಯ ವಿದ್ಯಾಮನಗಳ ಬಗ್ಗೆ ಅಮಿತ್ ಶಾ ಹಾಗೂ ನಡ್ಡಾ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕನ ಆಯ್ಕೆ ಚರ್ಚೆ ಮಧ್ಯೆ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಯಾರಿಗೆ ವಿಪಕ್ಷ ನಾಯಕನ ಸ್ಥಾನ ಒಲಿಯುತ್ತೆ ಎನ್ನುವ ಕುತೂಹಲ ಮೂಡಿಸಿದೆ.