ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಬಿರುಸಿನ ಆರೋಪ ಪ್ರತ್ಯಾರೋಪಗಳು ನಡೆದವು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಇದಕ್ಕೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಜೆಟ್ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ, ದೇಶದ ಆಸ್ತಿಗಳು ಖಾಸಗೀಕರಣವಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ 4.30 ಕೋಟಿ ಜನ ಬಡವರಾಗಿದ್ದಾರೆ. ಮೋದಿ ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂದು ಹೇಳುತ್ತಾರೆ. ಮೋದಿ ಬಂದ ಮೇಲೆ ಸಬ್ಕಾ ಸರ್ವನಾಶ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯರ ಮಾತಿನಿಂದ ಕೋಪಗೊಂಡ ಸಿ ಎಂ ಬೊಮ್ಮಾಯಿ, ಕಾಂಗ್ರೆಸ್ ನೀತಿಯಿಂದಲೇ ಆರ್ಥಿಕ ಸಂಕಷ್ಟ ಎದುರಾಗಿದ್ದು, WTO ಒಪ್ಪಂದ ಯಾರು ಮಾಡಿದ್ದು? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನ ಆಡಳಿತ ಕಾಲದಲ್ಲಿ ನವರತ್ನಗಳು ಮಾರಾಟ ಮಾಡಲು ಆರಂಭವಾಗಿದ್ದು ,ನಮ್ಮ ಸರ್ಕಾರ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಪ್ರಯತ್ನ ಮಾಡುತ್ತಿದೆ. ನಿಮ್ಮ ಸರ್ಕಾರ ಗರೀಬಿ ಹಟಾವೋ ಎಂದು ಹೇಳಿತ್ತು. ಕಹಾ ಗಯಾ ಗರೀಬ್? ಗರೀಬ್ ಔರ್ ಗರೀಬ್ ಬನ್ ಗಯಾ. ಪೂರಾ ದೇಶ್ ಗರೀಬ್ ಬನ್ ಗಯಾ ಎಂದು ಸಿಎಂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.