2,65,720 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ ಬೊಮ್ಮಾಯಿ: ಹಲವು ವಲಯಗಳ ಕಡೆಗಣನೆ

Prasthutha|

ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.

- Advertisement -

ಕಳೆದ ಬಾರಿಯಂತೆ ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿದ್ದಾರೆ. ಬಜೆಟ್ ನ ಆಯವ್ಯಯ ಗಾತ್ರ ಕಳೆದ ಬಜೆಟ್ ಗಿಂತ ಹೆಚ್ಚಾಗಿದ್ದು, ಈ ಬಜೆಟ್ ನ ಗಾತ್ರ 2,65,720 ಕೋಟಿ ರೂ.ರಷ್ಟು ಹೆಚ್ಚಾಗಿದೆ.

ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗೆ ಬಜೆಟ್ ನಲ್ಲಿ 43,188  ಕೋಟಿ ರೂ. ಹಾಗೂ ಮಕ್ಕಳ ಅಭ್ಯುಯದಕ್ಕೆ ಬಜೆಟ್ ನಲ್ಲಿ 40,944 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ ನಲ್ಲಿ 6 ವಲಯಗಳನ್ನು ಗುರುತಿಸಲಾಗಿದ್ದು, ಅದರಂತೆ ಮೊದಲ ವಲಯವಾದ ಕೃಷಿ ಮತ್ತು ಪೂರಕ ಚಟುವಟಿಕೆಗಳು ವಲಯಕ್ಕೆ 33,7000 ಕೋಟಿ ರೂ., ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 68,479 ಕೋಟಿ ರೂ., ಆರ್ಥಿಕ ಅಭಿವೃದ್ಧಿ ಉತ್ತೇಜನ ವಲಯಕ್ಕೆ 55,657 ಕೋಟಿ ರೂ., ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8409  ಕೋಟಿ ರೂ., ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ 3102 ಕೋಟಿ ರೂ., ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ವಲಯಕ್ಕೆ 56,700  ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ.

- Advertisement -

ಪರಿಶಿಷ್ಟ ಜಾತಿ, ಪಂಗಡಗಳ ಎಸ್ಸಿ, ಎಸ್ಟಿ/ ಟಿಎಸ್ಪಿಗೆ ಆಯವ್ಯಯದಲ್ಲಿ 28234  ಕೋಟಿ ರೂ. ಒದಗಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ 2229  ಕೋಟಿ ರೂ. ಹೆಚ್ಚಾಗಿದೆ. ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಇತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ 6329 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.

ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ರೈತ ಶಕ್ತಿ ಎಂಬ ಹೊಸ ಯೋಜನೆಯನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ. ಹಾಲು ಉತ್ಪಾದಕರಿಗೆ ಕಡಿಮೆ ಷರತ್ತಿನೊಂದಿಗೆ ಸಾಲ ಒದಗಿಸಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಘೋಷಣೆಯನ್ನು ಮಾಡಲಾಗಿದ್ದು, ಈ ಬ್ಯಾಂಕ್ ಗೆ ರಾಜ್ಯ ಸರ್ಕಾರ 100 ಕೋಟಿ ರೂ.ಗಳ ಷೇರು ಬಂಡವಾಳ ಒದಗಿಸಿದೆ.

ಗ್ರಾಮೀಣ ಪ್ರದೇಶದ ರೈತರ ಆರೋಗ್ಯ ಸೌಲಭ್ಯಕ್ಕಾಗಿ ಈ ಹಿಂದೆ ಇದ್ದ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡುವುದಾಗಿಯೂ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಹೇಳಿದ್ದು, ಇದಕ್ಕಾಗಿ 300 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ.

ರೇಷ್ಮೆ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳಲು ಪ್ರೋತ್ಸಾಹಿಸುವ ಪುಣ್ಯಕೋಟಿ ದತ್ತು ಯೋಜನೆಯನ್ನು ಆರಂಭಿಸುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.

ಗೋ ಉತ್ಪನ್ನಗಳ ಮಾರಾಟಕ್ಕಾಗಿ ಗೋಮಾತಾ ಸಹಕಾರ ಸಂಘವನ್ನು ಸ್ಥಾಪಿಸುವ ಘೋಷಣೆಯನ್ನು ಬಜೆಟ್ ನಲ್ಲಿ ಮಾಡಲಾಗಿದೆ. ಮೀನುಗಾರರ ಆದಾಯ ಹೆಚ್ಚಿಸಲು ಮತ್ಸ್ಯಸಿರಿ ಎಂಬ ವಿಶೇಷ ಯೋಜನೆಯನ್ನು ಜಾರಿ ಮಾಡುವುದಾಗಿಯೂ ಅವರು ಬಜೆಟ್ ನಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ 100 ಪಶು ಚಿಕಿತ್ಸಾಲಯಗಳನ್ನು ಆರಂಭಿಸುವ ಘೋಷಣೆಯನ್ನು ಬಜೆಟ್ ನಲ್ಲಿ ಮಾಡಲಾಗಿದೆ.

ರಾಜ್ಯದಲ್ಲಿ ನೀರಾವರಿ ಪ್ರದೇಶಗಳ ಯೋಜನೆಯನ್ನು ಹೆಚ್ಚಿಸಲು ಈ ಸಾಲಿನಲ್ಲಿ ಹೊಸದಾಗಿ ನೀರಾವರಿ ಯೋಜನೆಗಳಿಗೆ 8774 ಕೋಟಿ ರೂ.ಗಳನ್ನು ಒದಗಿಸಿ, ಕಾಳಿ ನದಿಯಿಂದ ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ. ಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಿ, ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ 1 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ.

ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ ನೀಡುವ ಗೌರವ ಧನವನ್ನು 1 ಸಾವಿರ ರೂ.ಗಳವರೆಗೆ ಹೆಚ್ಚಿಗೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 1 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಅವಿವಾಹಿತ, ವಿಚ್ಛೇದಿತ ಮಹಿಳೆಯರ ಪಿಂಚಣಿಯನ್ನು 600 ರಿಂದ 800 ರೂ.ಗಳಿಗೆ ಹೆಚ್ಚಿಸಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.ಪೌರ ಕಾರ್ಮಿಕರಿಗೆ ಮಾಸಿಕ 2 ಸಾವಿರ ಸಂಕಷ್ಟ ಭತ್ಯೆ ನೀಡುವುದಾಗಿಯೂ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾನುಭವ ಆಧಾರದಲ್ಲಿ 1000 ರೂ. ಗಳಿಂದ 1500 ರೂ.ಗಳ ಗೌರವ ಧನ ಹೆಚ್ಚಳ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಪಿಂಚಣಿಯನ್ನು 3 ಸಾವಿರದಿಂದ 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ 50 ಕೋಟಿ ರೂ., ಜೈನ್, ಸಿಖ್, ಬೌದ್ಧ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.ಮಾರ್ಗದರ್ಶಿಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ಉಚಿತ ತರಬೇತಿ ನೀಡಲು ಮುಖ್ಯಮಂತ್ರಿಗಳ ಮಾರ್ಗದರ್ಶಿ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ.

ಬೆಂಗಳೂರು-ತುಮಕೂರು-ಕಲ್ಬುರ್ಗಿಯಲ್ಲಿ ಈಗಾಗಲೇ ಸ್ಥಾಪಿಸುವ ಕಿದ್ವಾಯಿ ಕ್ಯಾನ್ಸರ್ ಕೇಂದ್ರವನ್ನು ಬೆಳಗಾವಿಯಲ್ಲಿ 50  ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವ ಘೋಷಣೆಯನ್ನು ಮಾಡಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು 7 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಗೇರಿಸುವ ಘೋಷಣೆ ಜತೆಗೆ ರಾಜ್ಯದ ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಗಳನ್ನು ಸ್ಥಾಪಿಸುವ ಘೋಷಣೆಯನ್ನು ಬಜೆಟ್ ನಲ್ಲಿ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ. 2021-22ನೇ ಸಾಲಿನಲ್ಲಿ ರಾಜ್ಯದ ಅರ್ಥ ವ್ಯವಸ್ಥೆಯು ಚೇತರಿಕೆಯತ್ತ ಸಾಗಿದೆ. ಈ ಸನ್ನಿವೇಶದಲ್ಲಿ ರಾಜ್ಯದ ಜನ ಸಾಮಾನ್ಯರ ಮೇಲೆ ಇನ್ನಷ್ಟು ತೆರಿಗೆ ವಿಧಿಸಲು ಇಚ್ಛಿಸುವುದಿಲ್ಲ. ಹಾಗಾಗಿ ಯಾವುದೇ ಹೊಸ ತೆರಿಗೆಗಳನ್ನು ವಿಧಿಸುತ್ತಿಲ್ಲ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದರು.

Join Whatsapp