ಬೊಮ್ಮಾಯಿ ಮಂಡಿಸಿದ್ದು ಮತಬ್ಯಾಂಕ್ ಗುರಿಯಾಗಿಸಿಕೊಂಡ ಬಜೆಟ್

Prasthutha|

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಪ್ರತಿ ವರ್ಷದ ಆಯವ್ಯಯದ ಲೆಕ್ಕವನ್ನು ಮಂಡಿಸಲಿರುವ ಬಜೆಟ್ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಇಂತಹ ಬಜೆಟ್ ಪರಿಕಲ್ಪನೆ ಭಾರತದಲ್ಲಿ ಮೊದಲ ಬಾರಿಗೆ ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಜೇಮ್ಸ್ ವಿಲ್ಸನ್ ಎಂಬವರು ಬ್ರಿಟಿಷ್ ರಾಣಿಗೆ ಏಪ್ರಿಲ್ 7, 1860 ರಂದು ಬಜೆಟ್ ಮಂಡಿಸುವ ಮೂಲಕ ಚಾಲನೆಗೆ ಬಂದಿತು. ಇದಾದ ನಂತರ ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ನವೆಂಬರ್ 26, 1947 ರಂದು ಅಂದಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು. ಕರ್ನಾಟಕದಲ್ಲಿ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53 ರಲ್ಲಿ 21 ಕೋಟಿ ರೂಗಳ ಬಜೆಟ್ ಅನ್ನು ಮೊದಲ ಬಾರಿಗೆ ಮಂಡಿಸಿದ್ದರು. ಇದಾದ ನಂತರ ಸಾಮಾನ್ಯವಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮಂತ್ರಿಗಳು ಬಜೆಟ್ ಮಂಡಿಸುತ್ತಾ ಬರುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿ ಸಿದ್ಧರಾಮಯ್ಯ ಮತ್ತು ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಮಂಡನೆಯಾಗಲಿರುವ ಬಜೆಟ್ ಗೆ ಜನ ಸಾಮಾನ್ಯರಿಂದ ಹಿಡಿದು ಬೃಹತ್ ಕೈಗಾರಿಕೋದ್ಯಮಿಗಳವರೆಗೆ ಎಲ್ಲರೂ ಕಾತುರದಿಂದ ಕಾಯ್ದು ಕುಳಿತಿರುತ್ತಾರೆ. ಬಜೆಟ್ ಆಧಾರದ ಮೇಲೆ ದೇಶದ, ರಾಜ್ಯದ, ಜಿಲ್ಲೆ, ತಾಲೂಕುಗಳ ಆಯವ್ಯಯ ನಿರ್ಧರಿತವಾಗುತ್ತದೆ. ಅಷ್ಟೇ ಅಲ್ಲದೆ ಇದು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಮಂಡಿಸುತ್ತಿರುವ ಅವರ ಮೊದಲ ಬಜೆಟ್ ಮೇಲೆ ಸಹಜವಾಗಿ ಹೆಚ್ಚಿನ ನಿರೀಕ್ಷೆ ಇತ್ತು. ಹಿಜಾಬ್, ಮತಾಂತರ, ಲವ್ ಜಿಹಾದ್, ದೇವಾಲಯಗಳ ಖಾಸಗೀಕರಣ, ಉಳ್ಳವರಿಗೆ ಭೂಮಿ ಮುಂತಾದವುಗಳನ್ನು ಆದ್ಯತೆಗಳನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸರ್ಕಾರದಿಂದ ಎಂತಹ ಬಜೆಟ್ ನಿರೀಕ್ಷಿಸಬಹುದು ಎಂಬ ಪ್ರಶ್ನೆಯೂ ಇತ್ತು.
ಕೊನೆಗೂ ಅದೇ ನಿಜವಾಗಿದೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬಜೆಟ್ ನಲ್ಲಿ ರೂ. 100 ಕೋಟಿ ಅನುದಾನ; ರಾಯಚೂರು ವಿಶ್ವವಿದ್ಯಾಲಯಕ್ಕೆ ರೂ 15 ಕೋಟಿ ಅನುದಾನವಿದ್ದು, ರಾಜ್ಯದ ಗೋ ಶಾಲೆಗಳಿಂದ ಗೋವನ್ನು ದತ್ತು ಪಡೆಯುವ ಸಾರ್ವಜನಿಕರು ಅಥವಾ ಸಂಸ್ಥೆಗಳಿಗೆ ವಾರ್ಷಿಕ 11,000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುವ ಇದೇ ಮೊದಲ ಬಾರಿಗೆ ಪುಣ್ಯಕೋಟಿ ಎಂಬ ಹೊಸ ಯೋಜನೆಯನ್ನು ಸಹ ಘೋಷಿಸಿದ್ದಾರೆ. ದಲಿತರು ಮತ್ತು ಆದಿವಾಸಿಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆಗೊಳಿಸಲಾಗಿದೆ. ರಾಜ್ಯದ ಜನಸಂಖ್ಯೆಯ ಶೇ. 24.01 ರಷ್ಟಿರುವ ದಲಿತರು ಮತ್ತು ಆದಿವಾಸಿಗಳ ಉಪಯೋಜನೆಗಳಿಗೆ ನೀಡುತ್ತಿದ್ದ ಅನುದಾನ 2017-18ರಲ್ಲಿ ಬಜೆಟ್ ವೆಚ್ಚದ ಶೇ. 14.98ರಷ್ಟಿತ್ತು. ಇದೀಗ 2022-23ರಲ್ಲಿ ಇದು ಬಜೆಟ್ ವೆಚ್ಚದ ಶೇ. 10.62ಕ್ಕಿಳಿದಿದೆ. ಬಿಜೆಪಿ ಸರಕಾರ ಬಂದಂದಿನಿಂದ ದಲಿತರ ಮೇಲಿನ ದೌರ್ಜನ್ಯಗಳು ಅಧಿಕವಾಗುತ್ತಿದ್ದು ಈ ಬಗ್ಗೆ ಸರಕಾರಕ್ಕೆ ಒಂದು ಪಶ್ಚಾತ್ತಾಪವಾದರೂ ಇಲ್ಲ. ಈ ವರ್ಗದ ಅನುದಾನವನ್ನು ಕಡಿತಗೊಳಿಸುವ ಅಮಾನವಿಯತೆಯನ್ನು ಬಜೆಟ್ ನಲ್ಲಿ ಪ್ರದರ್ಶಿಸಿದ್ದು ಎಷ್ಟು ಸರಿ ಎಂದು ಬಸವರಾಜ ಬೊಮ್ಮಾಯಿ ಉತ್ತರಿಸಬೇಕಿದೆ. ಇವೆಲ್ಲಾ ಈ ಸರ್ಕಾರದ ಆದ್ಯತೆಗಳೇನು ಎಂಬುದನ್ನು ತೋರಿಸಿಕೊಟ್ಟಿದೆ.
ಈ ಸಾಲಿನ ಬಜೆಟ್ ನಲ್ಲಿ ಜನಸಾಮಾನ್ಯರ ಮೇಲೆ ಯಾವ ತೆರಿಗೆಯನ್ನೂ ಹೇರಿಲ್ಲ ಎಂಬುದು ಪ್ರಧಾನ ಅಂಶ. ಅದನ್ನೇ ಬಿಜೆಪಿ ನಾಯಕರು ಕಾರ್ಯಕರ್ತರು ಸಂಭ್ರಮಿಸಲು ಜನಸಾಮಾನ್ಯರಿಗೆ ಹೇಳುತ್ತಿದ್ದಾರೆ. ಆದರೆ ಒಂದು ವಿಷಯವನ್ನು ಜನರು ಗಮನಿಸಬೇಕು, ಕರ್ನಾಟಕದಲ್ಲಿ ಚುನಾವಣೆ ಸಮೀಪದಲ್ಲಿದೆ. ಯಾವುದೇ ಚುನಾವಣಾ ಪೂರ್ವ ಬಜೆಟ್ ಗಳು ಸಾಮಾನ್ಯವಾಗಿ ತೆರಿಗೆ ರಹಿತವಾಗಿರುವುದು ಸಾಮಾನ್ಯವಾಗಿದೆ. ಆದ್ದರಿಂದ ತೆರಿಗೆ ಹೇರಿಲ್ಲ ಎಂದು ನಾವು ಸಮಾಧಾನ ಪಡುವಂತಿಲ್ಲ. ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೇರದೆ ಉಪಕರಿಸಿದ್ದರೂ ಬಜೆಟ್ ನಿಭಾಯಿಸಲು ಬೇಕಾಗಿ ದೊಡ್ಡ ಪ್ರಮಾಣದಲ್ಲಿ ಸಾಲ ತರಲು ಮುಂದಾಗಿದೆ ಸರಕಾರ. ಸಾಲದ ಮೂಲಕವೇ ಬಹುತೇಕ ರಾಜ್ಯದ ಖರ್ಚು-ವೆಚ್ಚಗಳನ್ನು ನಿಭಾಯಿಸುವ ಲೆಕ್ಕಾಚಾರ ಹಾಕಿದ್ದಾರೆ. ಬಜೆಟ್ ಅಂಕಿಅಂಶಗಳನ್ನು ಗಮನಿಸಿದರೆ, ಪ್ರಸ್ತಾಪಿತ 2022-23ನೇ ವರ್ಷದ ಬಜೆಟ್ ಒಟ್ಟು ಮೊತ್ತ 2,65,720 ಕೋಟಿ ರೂಪಾಯಿಗಳಷ್ಟಿದೆ. ಇದು ಹಾಲಿ ಚಾಲ್ತಿಯಲ್ಲಿರುವ 2021-22 ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ. 7.7 ರಷ್ಟು ಹೆಚ್ಚು. ಒಟ್ಟು 2,65,720 ಕೋಟಿ ರೂಪಾಯಿಗಳಲ್ಲಿ 72,000 ಕೋಟಿ ರುಪಾಯಿಗಳನ್ನು ಸಾಲದ ಮೂಲಕ ತರುತ್ತಿದ್ದಾರೆ. ಇಡೀ ಬಜೆಟ್ ನ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ ಸಾಲದ ಮೂಲಕ ತರುತ್ತಿರುವ ಮೊತ್ತವು ಶೇ.27ರಷ್ಟಾಗುತ್ತದೆ. ಮುಂದಿನ 2022-23ರಲ್ಲಿನ ಬಜೆಟ್ ಗಾತ್ರ ರೂ. 2 65,702 ಕೋಟಿ. ಇದರಲ್ಲಿ ಸಾಲದ ಪ್ರಮಾಣ ಶೇ. 27.09. ಆಗಿದೆ. ಮುಂದೆ ಇದನ್ನು ಬಡ ನಾಗರಿಕರ ಮೇಲೆ ಹೇರಲಾಗುವುದರಲ್ಲಿ ಸಂಶಯವಿಲ್ಲ.
ಮತ್ತೊಂದು ಗಮನಾರ್ಹ ವಿಫಲತೆ ಎಂದರೆ ರಾಜ್ಯದ ಜನಸಂಖ್ಯೆಯ ಶೇ. 2.53 ಲಕ್ಷ ಹುದ್ದೆಗಳು ಖಾಲಿಯಿರುವುದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲ. ಕೋವಿಡ್ ನಂತರ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸದಾಗಿ ಉದ್ಯೋಗಾವಕಾಶ ಆಗುತ್ತಿಲ್ಲ. ಯುವಜನರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಎಲ್ಲೂ ಕೆಲಸ ಸಿಗುತ್ತಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕೊರೋನದಿಂದ ಆಗಿದ್ದ ಅನಾಹುತವನ್ನು ಸುಧಾರಿಸುವ ಬಗ್ಗೆ ಬಜೆಟ್ ನಲ್ಲಿ ಮಾತೇ ಇಲ್ಲದಿರುವುದು ತುಂಬಾ ನಿರಾಶಾದಾಯಕವಾಗಿದೆ.

- Advertisement -

ಒಕ್ಕೂಟ ಸರ್ಕಾರದಿಂದ 2019-20ರಲ್ಲಿ ರಾಜ್ಯಕ್ಕೆ ವರ್ಗಾವಣೆಯಾದ ಮೊತ್ತವು ಆ ವರ್ಷದ ಬಜೆಟ್ ವೆಚ್ಚದ ಶೇ. 21.73 ರಷ್ಟಿದ್ದರೆ ಈ ವರ್ಷ ಇದು ಶೇ. 17.71ಕ್ಕಿಳಿದಿದೆ. ಕರ್ನಾಟಕಕ್ಕೆ ಬರಬೇಕಾಗಿದ್ದ ಜಿ ಎಸ್ ಟಿ ಪರಿಹಾರ 2021-22ರಲ್ಲಿ ರೂ. 18109 ಕೋಟಿಯನ್ನು ನಮಗೆ ಅದು ಸಾಲ ನೀಡಿದೆ. 2022-23ರಲ್ಲಿ ರೆವಿನ್ಯೂ ಕೊರತೆ ರೂ. 14699 ಕೋಟಿ. ನಮ್ಮ ಒಟ್ಟು ಋಣಬಾರ ಇಲ್ಲಿಯವರೆಗೆ ನಮ್ಮ ಜಿ ಎಸ್ ಡಿ ಪಿಯ ಶೇ. 25ಕ್ಕಿಂತ ಕಡಿಮೆಯಿರುತ್ತಿತ್ತು. ಈಗ 2022-23ರಲ್ಲಿ ಅದು ಶೇ. 27.49ಕ್ಕೆರಿದೆ.
ಕೋವಿಡ್, ಲಾಕ್ ಡೌನ್, ತೆರಿಗೆ ಮೂಲದ ಆದಾಯ ಸಂಗ್ರಹದಲ್ಲಾದ ಕೊರತೆ ಇತ್ಯಾದಿ ಕಾರಣಗಳೇನೆ ಇದ್ದರೂ ಸಾಲದ ಹೊರೆ ಈಗ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಮಿತಿಯನ್ನು ಮೀರಿದೆ. ಕಾಯ್ದೆ ಪ್ರಕಾರ, ರಾಜ್ಯ ಸರ್ಕಾರವು ತನ್ನ ಒಟ್ಟು ರಾಜ್ಯದ ಉತ್ಪನ್ನದ ಶೇ.20ಕ್ಕಿಂತಲೂ ಹೆಚ್ಚಿನ ಸಾಲ ಮಾಡಬಾರದು. 2021-22ನೇ ವಿತ್ತೀಯ ವರ್ಷದಲ್ಲಿ ರಾಜ್ಯದ ಒಟ್ಟು ಉತ್ಪನ್ನದ ಮೊತ್ತವು 17,02,227 ಕೋಟಿ ರುಪಾಯಿಗಳಷ್ಟಿದೆ. ರಾಜ್ಯ ಸರ್ಕಾರ ತನ್ನ ಎಸ್ಜಿಡಿಪಿಯ ಶೇ.20ರಷ್ಟು ಎಂದರೆ, 3,40,445 ಕೋಟಿ ರೂಪಾಯಿ ಸಾಲ ಪಡೆಯಬಹುದಾಗಿದೆ. ಕಾಯ್ದೆಯ ಮಿತಿಯನ್ನು ದಾಟಿ 1,17,454 ಕೋಟಿ ರೂಪಾಯಿ ಸಾಲ ಮಾಡಲಾಗಿದೆ. ಈಗ ಹೊಸ ಸಾಲವೂ ಸೇರಿದರೆ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗುತ್ತದೆ. ಸಾಲದ ಸಮಸ್ಯೆ ವಿಷವರ್ತುಲ ಇದ್ದಂತೆ. ಅದರೊಳಗೆ ಸಿಕ್ಕಿಬಿದ್ದರೆ ಮುಗಿಯಿತು. ಮಾಡಿರುವ ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲು ಒಟ್ಟು ಬಜೆಟ್ ನ ಮೊತ್ತದಲ್ಲಿ ಶೇ.17ರಷ್ಟು ಅಂದರೆ 45,169 ಕೋಟಿ ರೂಪಾಯಿಗಳು ವಿನಿಯೋಗವಾಗುತ್ತವೆ. ಸಾಲದ ಮೊತ್ತ ಮತ್ತಷ್ಟು ಹೆಚ್ಚಿದರೆ, ಪಾವತಿಸಬೇಕಾದ ಅಸಲು ಮತ್ತು ಬಡ್ಡಿಯ ಪ್ರಮಾಣವೂ ಹೆಚ್ಚುತ್ತದೆ.
ಇನ್ನುಳಿದಂತೆ ಈ ಹಿಂದೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಬೇಕಿದ್ದ ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧ ಚಿತ್ರವನ್ನು ಹೊರಗಿಟ್ಟಿದ್ದಕ್ಕಾಗಿ ಬಿಜೆಪಿಗೆ ತೀವ್ರ ಕಟು ಟೀಕೆಗಳು ಎದುರಾಗಿದ್ದವು. ಆ ಡ್ಯಾಮೇಜ್ ಕಂಟ್ರೋಲ್ ಮಾಡಲು ಬೊಮ್ಮಾಯಿ ನಾರಾಯಣ ಗುರು ಹೆಸರಿನಲ್ಲಿ ಶಾಲೆಗಳನ್ನು ಸ್ಥಾಪಿಸುವುದಾಗಿ ಬಜೆಟಲ್ಲಿ ಘೋಷಿಸಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ನಾರಾಯಣ ಗುರುವಿನ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಬಜೆಟ್ ಬಾಷಣದ ವೇಳೆ ಘೋಷಿಸಿದ್ದರು.
ಒಟ್ಟಿನಲ್ಲಿ ಸಮುದಾಯ ಮತ್ತು ಮತಬ್ಯಾಂಕ್ ಲಾಭದ ವಿಷಯಗಳಲ್ಲಿ ಇಂತಹ ತಿದ್ದುಪಡಿ ಮಾರ್ಗಗಳನ್ನು ಕಂಡುಕೊಂಡಿರುವ ಬೊಮ್ಮಾಯಿ, ಕೋವಿಡ್ ಸಂಕಷ್ಟದಿಂದ ನೆಲಕಚ್ಚಿರುವ ವ್ಯಾಪಾರಿಗಳು, ಉದ್ಯಮಿಗಳು, ಸಣ್ಣಪುಟ್ಟ ವಹಿವಾಟುದಾರರ ವಿಷಯದಲ್ಲಿ ಮಾತ್ರ ಅಂತಹ ಯಾವ ಯತ್ನಗಳನ್ನೂ ಮಾಡದೆ ಸಂಪೂರ್ಣ ಅವರನ್ನು ನಿರ್ಲಕ್ಷಿಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಕೋಮುವಾದಿಗಳಿಂದ ನರಗುಂದದ ಸಮೀರ್ ಮತ್ತು ವೈಯಕ್ತಿಕ ದ್ವೇಶದಿಂದ ಶಿವಮೊಗ್ಗದ ಹರ್ಷ ಕೊಲೆಯಾಗುವಾಗ ಸಮೀರ್ ಮನೆಗೆ ಶಾಸಕರ ಭೇಟಿಯಾಗಲಿ ನಯಾ ಪೈಸೆ ಪರಿಹಾರವಾಗಲಿ ಕೊಡದೆ ಹರ್ಷನ ಮನೆಗೆ ಸಚಿವರ ತಂಡೋಪ ತಂಡ ಭೇಟಿ, ಹಣ ಸಹಾಯ ಮತ್ತು ಸರಕಾರದ ವತಿಯಿಂದಲೇ 25 ಲಕ್ಷ ರೂಪಾಯಿ ಪರಿಹಾರ ನೀಡಿದ ಬಿಜೆಪಿ ಸರಕಾರದ ಬಜೆಟ್ ಕೂಡ ಮಾನವೀಯತೆಗಿಂತ ಮತ ಬ್ಯಾಂಕನ್ನು ಗುರಿಯಾಗಿಸಿಕೊಂಡದ್ದು ಸ್ಪಷ್ಟವಾಗುತ್ತದೆ.



Join Whatsapp