ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ, ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನ: ಎಚ್ ಡಿ ಕುಮಾರಸ್ವಾಮಿ

Prasthutha|

►► ಬೆಂಗಳೂರು ಅಭಿವೃದ್ಧಿ ಎಂದರೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗುವುದಾ?

- Advertisement -

ಹಾಸನ: ಬೆಂಗಳೂರು ಉಪನಗರ ರೈಲು ಪರಿಕಲ್ಪನೆ ಎಚ್.ಡಿ.ದೇವೇಗೌಡರದ್ದು. ಆದರೆ, ನರೇಂದ್ರ ಮೋದಿ ಅವರು ಮತ್ತು ಬಿಜೆಪಿ ನಾಯಕರು ಈ ಯೋಜನೆ ತಮ್ಮದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಅವರು ಜನರಿಗೆ ಸತ್ಯ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು. ನಿನ್ನೆ ಬೆಂಗಳೂರಿನಲ್ಲಿ ಮೋದಿ ಹಾಗೂ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದ ಮಾಜಿ ಮುಖ್ಯಮಂತ್ರಿಗಳು; ಹಾಸನದಲ್ಲಿ ಇಂದು ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದರು.


ರಾಷ್ಟ್ರದ ಗೌರವಾನ್ವಿತ ಪ್ರಧಾನಿ ಮೈಸೂರಿಗೆ ಭೇಟಿ ನೀಡಿ ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನ ನಾಗರೀಕರ ಜತೆ ಯೋಗ ಆಯೋಜನೆಯಲ್ಲಿ ಭಾಗಿಯಾಗಿದ್ದರು. ಇದನ್ನು ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಆದರೆ, ಬೆಂಗಳೂರಿನ ಕೊಮ್ಮಘಟ್ಟದ ಸಭೆಯಲ್ಲಿ ಅವರು ಭಾಷಣ ಮಾಡಬೇಕಾದರೆ, ಇದುವರೆಗೆ ರಾಜ್ಯದಲ್ಲಿ ಇದ್ದ ಸರಕಾರಗಳು ಏನೂ ಮಾಡಿಯೇ ಇಲ್ಲ ಎಂದು ಹೇಳಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟವರನ್ನು ಸ್ಮರಿಸುವುದು ದೊಡ್ಡತನ. ಅದನ್ನು ಪ್ರಧಾನಿ ಮಾಡಲೇ ಇಲ್ಲ. ಹಿಂದಿನ ಸರಕಾರಗಳು ಮಾಡಿರುವ ಜನಪರ ಕೆಲಸಗಳನ್ನು ಒಪ್ಪಿಕೊಳ್ಳುವ ಅಥವಾ ಹೇಳುವ ಹೃದಯ ವೈಶಾಲ್ಯತೆ ಪ್ರಧಾನಿ ಅವರಿಗೆ ಇರಬೇಕಾಗಿತ್ತು ಎಂದು ಹೇಳಿದರು.

- Advertisement -


ಬ್ರಿಟಿಷ್ ಅಧಿಕಾರದಲ್ಲಿ ದೇಶವನ್ನು ಒಡೆಯುವ ಕೆಲಸವಾಯಿತು. ಅವತ್ತು ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಪ್ರಾಣ ತೆತ್ತರು. ಈ ದೇಶ ಸ್ವಾತಂತ್ರ್ಯ ಕಂಡಾಗಿನಿಂದ ಇಲ್ಲಿಯವರೆಗೆ ನಿರಂತರ ಅಭಿವೃದ್ಧಿ ಕಂಡಿದೆ. ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರಿಂದ ಇಂದಿನವರೆಗೆ ಎಲ್ಲ ಪ್ರಧಾನಿಗಳಿಂದ ಅಭಿವೃದ್ಧಿ ಕೆಲಸಗಳು ಆಗಿವೆ. ಮೋದಿ ಒಬ್ಬರಿಂದಲೇ ಅಥವಾ ಅವರು ಅಧಿಕಾರಕ್ಕೆ ಬಂದ 8 ವರ್ಷಗಳಿಂದಲೇ ಆಗಿಲ್ಲ ಎನ್ನುವುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಂದು ಮೋದಿ ಅವರು ಎಲ್ಲವೂ ನನ್ನಿಂದಲೇ ಆಗುತ್ತಿದ್ದೆ ಎನ್ನುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತ ನಿಲುವು ಹೊಂದಿರಬೇಕು ಎಂದು ಹೇಳಿದರು.


ಅಂದು ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ, ನೀರಾವರಿ, ಕೈಗಾರಿಕೆ ಸೇರಿ ಹಲವಾರು ಕ್ಷೇತ್ರಗಳಿಗೆ ಕೊಡುಗೆ ಕೊಟ್ಟಿದ್ದಾರೆ. ದೇಶ ಇಬ್ಭಾಗವಾದಾಗ ನಿರಾಶ್ರಿತರ ಪರಿಸ್ಥಿತಿ ಹೇಗಿತ್ತು? 200 ಕೋಟಿ ರೂ. ಸಾಲ ತಂದು ಮೊದಲನೇ ಪಂಚವಾರ್ಷಿಕ ಯೋಜನೆಯನ್ನು ಆರಂಭ ಮಾಡಲಾಗಿತ್ತು. ಆಗ ದೇಶ ಬಜೆಟ್ ಮೊತ್ತ ಎಷ್ಟಿತ್ತು? ಈಗ ಎಷ್ಟಿದೆ? ಬೆಂಗಳೂರಿನಲ್ಲಿ 33 ಸಾವಿರ ಕೋಟಿ ರೂ. ಮೊತ್ತದ ಅನುದಾನದ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಪ್ರಧಾನಿ ಭಾಷಣ ಮಾಡಿದ್ದಾರೆ. ಇದರಲ್ಲಿ ಮೋದಿ ಅವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರಕಾರಗಳ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಉಪನಗರ ರೈಲು ಯೋಜನೆ ಬಗ್ಗೆ 40 ವರ್ಷ ಆಗದ ಸಾಧನೆಯನ್ನು ನಲವತ್ತು ತಿಂಗಳಲ್ಲಿ ಮಾಡಿದ್ದೇವೆ ಎನ್ನುತ್ತಿದ್ದಾರೆ.

ನಾನು 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅಂದಿನ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದೆ. ನಂತರ ಅವರನ್ನು ಬೆಂಗಳೂರಿನ ಕೃಷ್ಣಾ ಕಚೇರಿಗೇ ಕರೆಸಿ ಯೋಜನೆಯನ್ನು ಅಂತಿಮಗೊಳಿಸಲಾಯಿತು. ಆಗ ಪ್ರಧಾನಿ ಅವರಿಂದ ಶಂಕುಸ್ಥಾಪನೆ ಮಾಡಿಸಬೇಕು ಎಂದು ನಿರ್ಧಾರ ಕೈಗೊಳ್ಳಲಾಯಿತು. ದೇವೇಗೌಡರು ಪ್ರಧಾನಿ ಆಗಿದ್ದಾಗಲೇ ಈ ಯೋಜನೆ ರೂಪಿಸಲು ಮುಂದಾಗಿದ್ದರು. ಅಷ್ಟರಲ್ಲಿ ಅವರ ಸರಕಾರ ಹೋಯಿತು. ಆದರೆ, ನನ್ನ ಸರಕಾರದ ಅವಧಿಯಲ್ಲಿ ಯೋಜನೆಗೆ ಮರುಚಾಲನೆ ನೀಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯೋಜನೆಯನ್ನು ಕಸದ ಬುಟ್ಟಿಗೆ ಹಾಕಿದ್ದದರು. ಈಗ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಕಾರಣ ಅವರಿಗೆ ಜ್ಞಾನೋದಯವಾಗಿದೆ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದರು.


ಬೆಂಗಳೂರು-ಮೈಸೂರು ಎಕ್ಸ್ʼಪ್ರೆಸ್ ಹೈವೆ ಬಗ್ಗೆ ನಾನು ಸಿಎಂ ಆಗಿದ್ದಾಗ 8 ಸಭೆ ಮಾಡಿದ್ದೇನೆ. ನಮ್ಮ ಅವಧಿಯಲ್ಲಿ ಈ ರಸ್ತೆ ಕೆಲಸಕ್ಕೆ ವೇಗ ನೀಡಿದ್ದೆವು. ನಮ್ಮ ಪ್ರಧಾನಿಗಳು ಈಗ ಬಂದು ಮಾತನಾಡುತ್ತಿದ್ದಾರೆ. ಹಿಂದೆ ನಡೆದ ಕೆಲಸ ಬಗ್ಗೆ ಅವರು ಮಾಹಿತಿ ಪಡೆಯಬೇಕು, ಮಾತನಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.


ಬೋಗಿ ಬೇಲ್ ಸೇತುವೆ; ದೇವೇಗೌಡರನ್ನು ಸ್ಮರಿಸಲಿಲ್ಲ:
ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ಮೇಲೆ ನಿರ್ಮಾಣವಾಗಿರುವ ಬೋಗಿ ಬೇಲ್ ಸೇತುವೆ ಯೋಜನೆಗೆ ಅಡಿಗಲ್ಲು ನೀಡಿದ್ದು ದೇವೇಗೌಡರು. ಆದರೆ, ಆ ಸೇತುವೆಯನ್ನು ಉದ್ಘಾಟನೆ ಮಾಡಿದ್ದು ಮೋದಿ ಅವರು. ಸೌಜನ್ಯಕ್ಕೂ ಆ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಲಿಲ್ಲ. ಆದರೆ, ಮೋದಿ ಅವರು ತಾವೇ ಈ ಯೋಜನೆಯ ಮೂಲಪುರುಷ ಎಂದು ಪೋಸು ಕೊಟ್ಟರು. ಆ ಸಂದರ್ಭದಲ್ಲಿ ದೇವೇಗೌಡರನ್ನು ಅವರು ಒಂದು ಬಾರಿಯೂ ನೆನೆಪಿಸಿಕೊಳ್ಳಲಿಲ್ಲ. ಆದರೆ, ಅಲ್ಲಿನ ಮಾಧ್ಯಮಗಳು ಮಾತ್ರ, “ದೇವೇಗೌಡರು ಎಲ್ಲಿ? ಅವರನ್ನು ಯಾಕೆ ಕರೆಸಲಿಲ್ಲ?” ಎಂದು ಪ್ರಶ್ನಿಸಿದವು ಎಂದು ಕುಮಾರಸ್ವಾಮಿ ಹೇಳಿದರು.


ಹಾಲಿ ಸಿಎಂಗೆ ಟಾಂಗ್ ಕೊಟ್ಟ ಮಾಜಿ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷಗಳಿಗೆ ನಮ್ಮನ್ನು ಟೀಕಿಸುವುದೇ ಕೆಲಸ ಎಂದಿದ್ದಾರೆ. ಅದು ಬಿಜೆಪಿಯ ಚಾಳಿ. ಇತರೆ ಪಕ್ಷಗಳು ಮಾಡುವ ಕೆಲಸಗಳನ್ನು ಟೀಕಿಸಿ, ತಾನು ಅಧಿಕಾರಕ್ಕೆ ಬಂದಾಗ ಆ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಆ ಕಾರ್ಯಕ್ರಮಗಳು ನಮ್ಮವೇ ಎಂದು ಸುಳ್ಳು ಹೇಳುತ್ತಿದೆ. ಹಿಂದಿನ ಕೇಂದ್ರ ಸರಕಾರಗಳು ಆಧಾರ್, ಜಿಎಸ್ ಟಿ ಇತ್ಯಾದಿಗಳನ್ನು ಜಾರಿಗೆ ತರಲು ಹೊರಟಾಗ ಮೊದಲು ವಿರೋಧ ಮಾಡಿದ್ದೇ ಬಿಜೆಪಿ. ಕೊನೆಗೆ ಅದೇ ಯೋಜನೆಗಳನ್ನು ಬಿಜೆಪಿ ಅಪ್ಪಿಕೊಂಡಿದೆ. ರಾಷ್ಟ್ರ ರಾಜಧಾನಿ, ಅದರಲ್ಲೂ ಪ್ರಧಾನಮಂತ್ರಿ ನಿತ್ಯ ಸಂಚರಿಸುವ ದೆಹಲಿಯಲ್ಲಿ ಅನೇಕರಿಗೆ ಸೂರಿಲ್ಲ. ಮೆಟ್ರೋ ಸೇತುವೆಗಳ ಕೆಳಗೆ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಒಂದು ಅಪಘಾತವಾಗಿ ಫ್ಲೈ ಓವರ್ ಕೆಳಗೆ ಮಲಗಿದ್ದ ಇಬ್ಬರು ಮಕ್ಕಳು ಸಾವಿಗೀಡಾದರು. ಇದಾ ಮೋದಿ ಅವರ ಅಭಿವೃದ್ಧಿ? ಎಂದು ಕುಮಾರಸ್ವಾಮಿ ಕುಟುಕಿದರು.

ಬೆಂಗಳೂರು ಅಭಿವೃದ್ಧಿ ಎಂದರೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗುವುದಾ?
ಬೆಂಗಳೂರಿನಲ್ಲಿ ಒಬ್ಬ ಎಂಜಿನಿಯರ್ ರಾಜಕಾಲುವೆಯಲ್ಲಿ ಕೊಚ್ಚಿಹೋದ. ರಸ್ತೆಗುಂಡಿಗಳ ಕಾರಣಕ್ಕೆ ಅಪಘಾತ ಆಗಿ ಓರ್ವ ಮಹಿಳೆ ಸಾವನ್ನಪ್ಪಿದರು. ಅವರದ್ದೇ ಪಕ್ಷದ ಸರಕಾರ ಎಸಗಿದ ತಪ್ಪುಗಳ ಬಗ್ಗೆ ಮೋದಿ ಅವರು ಮಾತನಾಡಲೇ ಇಲ್ಲ. ಕಳಪೆ ಕಾಮಗಾರಿ, ನಲವತ್ತು ಪರ್ಸೆಂಟೇಜ್ ವ್ಯವಹಾರ ಇತ್ಯಾದಿಗಳ ಬಗ್ಗೆ ಪ್ರಧಾನಿ ಮಾತನಾಡಲಿಲ್ಲ, ಯಾಕೆ? ಬೆಂಗಳೂರು ಅಭಿವೃದ್ಧಿ ಎಂದರೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗುವುದಾ? ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.


ರೈತರ ಬದುಕು ಕಳೆದ 8 ವರ್ಷಗಳಲ್ಲಿ ಬದಲಾಗಲಿಲ್ಲ. ಕರ್ನಾಟಕದಲ್ಲಿ ಮುಂದಿನ 11 ತಿಂಗಳಲ್ಲಿ ಚುನಾವಣೆ ಇದೆ. ಹಾಗಾಗಿ ಮುಂದಿನ ಹನ್ನೊಂದು ತಿಂಗಳಲ್ಲಿ ಹನ್ನೊಂದು ಬಾರಿ ಮೋದಿ ಬರಬಹುದು. ಕರ್ನಾಟಕಕ್ಕೆ ನೆರೆ, ಕೋವಿಡ್ ಸಂದರ್ಭದಲ್ಲಿ ಅವರು ಬರಲಿಲ್ಲ. ಜನರು ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಮೋದಿ ಬಂದು ಹೋಗಿದ್ದಕ್ಕೆ 32 ಕೋಟಿ ಖರ್ಚಾಗಿದೆ. ಈ ಹಣದಿಂದ ಒಂದು ಗ್ರಾಮ ಪಂಚಾಯತಿಯನ್ನು ಉದ್ಧಾರ ಮಾಡಬಹುದಿತ್ತು. ದೇವೇಗೌಡರು ಪ್ರಧಾನಿ ಆಗಿದ್ದಾಗ ಕರ್ನಾಟಕಕ್ಕೆ ಬಂದು ಹೋವಗುತ್ತಿದ್ದಕ್ಕೆ ಕೆಲವರು ಟೀಕಿಸುತ್ತಿದ್ದರು. ಈಗ ಮೋದಿ ಬಂದರೆ ಜೋರಾಗಿ ಕಿರುಚುತ್ತಾರೆ ಎಂದು ಹೇಳಿದರು.


ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ನನಗೆ ಕನಿಕರವಿದೆ. ಅವರದ್ದೇನೂ ನಡೆಯುತ್ತಿಲ್ಲ. ಬೊಮ್ಮಾಯಿ ಅವರು ರಿಮೋಟ್ ಕಂಟ್ರೋಲ್ ಸಿಎಂ. ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನವಾಗುತ್ತದೆ. ಪಿಎಸ್ ಐ ಹಗರಣದಲ್ಲಿ ಕಿಂಗ್ ಪಿನ್ ಬಗ್ಗೆ ನಾನು ಹೇಳಿದ್ದೆ. ಆ ಕಿಂಗ್ ಪಿನ್ ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ತನಿಖೆ ನಡೆಸುತ್ತಿರುವವರೇ ಇವರು, ಇವರಿಗೇ ಅವರ ಹೆಸರು ಗೊತ್ತಿಲ್ಲವೇ? ತಪ್ಪು ಮಾಡಿದರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ತನಿಖೆ ನಡೆಸುತ್ತಿರುವವರಿಗೆ ಎಲ್ಲವೂ ಗೊತ್ತಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣೇ ಗೌಡ ಮತ್ತಿತರರು ಹಾಜರಿದ್ದರು.

Join Whatsapp