ಬಾಗ್ದಾದ್: ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಗೊಂಡು 35 ಮಂದಿ ಮೃತಪಟ್ಟ ಘಟನೆ ಇರಾಕ್ ರಾಜಧಾನಿ ಬಾಗ್ದಾದ್ ನ ಉಪನಗರ ಸದರ್ ಸಿಟಿಯಲ್ಲಿ ಸೋಮವಾರ ಸಂಭವಿಸಿದೆ.
ಈದ್ ಹಬ್ಬಕ್ಕಾಗಿ ಜನರು ಖರೀದಿಯಲ್ಲಿ ತೊಡಗಿದ್ದ ವೇಳೆ ರಸ್ತೆ ಬದಿಯಲ್ಲಿ ಬಾಂಬ್ ಸ್ಫೋಟಗೊಂಡಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ದಾಳಿಯ ಹೊಣೆ ಹೊತ್ತುಕೊಂಡಿದೆ. ಐಎಸ್ ಟೆಲಿಗ್ರಾಂ ಚಾನೆಲ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಬು ಹಂಝಾ ಅಲ್-ಇರಾಕಿ ಹೆಸರಿನ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಕೆಲವರು ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಘಟನೆ ಖಂಡಿಸಿರುವ ಪ್ರಧಾನಿ ಮುಸ್ತಫಾ ಅಲ್ -ಖದಿಮಿ ಅವರು ಭಧ್ರತಾ ಪಡೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಮಾಹಿತಿ ಪಡೆದಿದ್ದಾರೆ.