ಗಾಝಾದಲ್ಲಿ ಬಾಂಬ್ ದಾಳಿ; ಮಾನವೀಯತೆ ಎಲ್ಲಿದೆ: ಪ್ರಿಯಾಂಕಾ ಗಾಂಧಿ ಪ್ರಶ್ನೆ

Prasthutha|

ನವದೆಹಲಿ: ಗಾಝಾದಲ್ಲಿ ಬಾಂಬ್ ದಾಳಿಗೆ ಅಮಾಯಕರು ಬಲಿಯಾಗುತ್ತಿದ್ದು, ಮಾನವೀಯತೆ ಎಲ್ಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನೆ ಮಾಡಿದ್ದಾರೆ.

- Advertisement -

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, ತಾತ್ಕಾಲಿಕ ಕದನ ವಿರಾಮಗಿಂತಲೂ ನಿರ್ದಯವಾಗಿ ಗಾಜಾದ ಮೇಲೆ ಬಾಂಬ್ ದಾಳಿ ಮುಂದುವರಿದಿದೆ. ಆಹಾರ ಸಾಮಗ್ರಿಗಳ ಕೊರತೆ ಕಾಡುತ್ತಿದೆ. ವೈದ್ಯಕೀಯ ಸೇವೆಗಳು ನಿಂತು ಹೋಗಿವೆ. ಮೂಲಭೂತ ಸೌಕರ್ಯಗಳು ಸ್ಥಗಿತಗೊಂಡಿವೆ ಎಂದು ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಸುಮಾರು 10,000 ಮಕ್ಕಳೂ ಸೇರಿದಂತೆ 16 ಸಾವಿರ ಅಮಾಯಕ ನಾಗರಿಕರು ಸಾವಿಗೀಡಾಗಿದ್ದಾರೆ. 60ಕ್ಕೂ ಹೆಚ್ಚು ಪತ್ರಕರ್ತರು, ನೂರಾರು ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಅವರು ಉಲ್ಲೇಖ ಮಾಡಿದ್ದಾರೆ. ಇಡೀ ದೇಶವೇ ನಾಶವಾಗಿದೆ. ಅವರೆಲ್ಲರೂ ನಮ್ಮಲ್ಲರಂತೆಯೇ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ನಮ್ಮ ಕಣ್ಣೆದುರೇ ಯಾವುದೇ ಕನಿಕರವಿಲ್ಲದೆ ಸಾಯಿಸಲಾಗುತ್ತಿದೆ. ನಮ್ಮ ಮಾನವೀಯತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಜಾಗತಿಕ ಸಮುದಾಯದ ಸದಸ್ಯರಾಗಿ ಯಾವುದು ಸರಿಯೋ ಅದರ ಪರ ನಿಲ್ಲುವುದು ಭಾರತದ ಕರ್ತವ್ಯವಾಗಿದೆ. ಆದಷ್ಟು ಬೇಗ ಕದನ ವಿರಾಮ ಘೋಷಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನಾವು ಮಾಡಬೇಕು ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.

Join Whatsapp