ಮುಂಬೈ : ಐಸಿಸ್ ಭಯೋತ್ಪಾದಕ ನಂಟಿನ ಆರೋಪದಲ್ಲಿ ಬಂಧಿತನಾಗಿದ್ದ 27ರ ಹರೆಯದ ಅರೀಬ್ ಮಜೀದ್ ಗೆ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿದೆ. ನ್ಯಾ. ಎಸ್.ಎಸ್. ಶಿಂಧೆ ಮತ್ತು ನ್ಯಾ. ಮನೀಶ್ ಪಿತಾಳೆ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿ, ವಿಶೇಷ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿಯಿತು.
ಅರೀಬ್ ಮಜೀದ್ ಗೆ ಎನ್ ಐಎ ನ್ಯಾಯಾಲಯ ಕಳೆದ ವರ್ಷದ ಮಾರ್ಚ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ಮತ್ತು ಆರೋಪಿ ವಿರುದ್ಧದ ಆರೋಪಗಳನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು.
ನ್ಯಾಯೋಚಿತ ಮತ್ತು ತ್ವರಿತ ವಿಚಾರಣೆ ಸಾಂವಿಧಾನಿಕ ಹಕ್ಕು ಆಗಿದೆ. ದೀರ್ಘ ಕಾಲದ ವಿಚಾರಣೆಯ ಬಳಿಕ ಆರೋಪಿಯು ನಿರ್ದೋಷಿತನಾದರೆ, ವಿಚಾರಣಾಧೀನ ಅವಧಿಯಲ್ಲಿ ಅಂತಹ ಆರೋಪಿಯು ಜೈಲಿನಲ್ಲಿ ಕಳೆದ ವರ್ಷಗಳನ್ನು ಹಿಂದಿರುಗಿಸಿ ಕೊಡಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮಜೀದ್ ನನ್ನು 2014ರಲ್ಲಿ ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿತ್ತು. ಕಳೆದ ವರ್ಷದ ಮಾರ್ಚ್ ನಲ್ಲಿ ಆತನಿಗೆ ಜಾಮೀನು ನೀಡಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಎನ್ ಐಎ ಹೈಕೋರ್ಟ್ ಮೆಟ್ಟಿಲೇರಿತ್ತು.