ಮುಂಬೈ: ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಅವರ ನಿವಾಸ ‘ಮನ್ನತ್’ ಅನ್ನು ಸ್ಫೊಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಜಿತೇಶ್ ಕುಮಾರ್ ಎಂಬಾತ ಜನವರಿ 6ರಂದು ಮಹಾರಾಷ್ಟ್ರ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಬಾಂದ್ರಾದಲ್ಲಿರುವ ಶಾರುಖ್ ನಿವಾಸ ಸೇರಿದಂತೆ ಮುಂಬೈನ ಹಲವೆಡೆ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಮುಂಬೈ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ಬೆದರಿಕೆ ಹಾಕಿದ ವ್ಯಕ್ತಿ ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಕುರ್ಲಾ ರೈಲ್ವೆ ಸ್ಟೇಷನ್, ಖರ್ಗರ್ನಲ್ಲಿರುವ ಗುರುದ್ವಾರ’ ಸೇರಿದಂತೆ ಹಲವು ಸ್ಥಳಗಳನ್ನು ನ್ಯೂಕ್ಲಿಯಾರ್ ಬಾಂಬ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆತನ ವಿರುದ್ಧ ಐಪಿಸಿ ಸೆಕ್ಷನ್ 182, 505 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸಿಎಸ್ಪಿ ಅಲೋಕ್ ಶರ್ಮಾ ಮಾತನಾಡಿ, ‘‘ಮಹಾರಾಷ್ಟ್ರ ಪೊಲೀಸರು ಜಬಲ್ಪುರದಿಂದ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದರು. ಪ್ರಕರಣದಲ್ಲಿ ನಮ್ಮ ಸಹಾಯ ಕೋರಿದ್ದರು. ಇದರಂತೆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ’’ ಎಂದಿದ್ದಾರೆ. ಬಂಧಿತ ಜಿತೇಶ್ ಕುಮಾರ್ ಹಿನ್ನೆಲೆ ಕುರಿತು ಮಾತನಾಡಿದ ಅವರು ‘‘ಆತನಿಗೆ ಬೇರೆ ಉದ್ದೇಶವಿರಲಿಲ್ಲ. ಆತ ಕುಡಿದಿದ್ದ. ಮಾನಸಿಕ ಅಸ್ವಸ್ಥತೆಯಿಂದ ಆತ ಬಳಲುತ್ತಿದ್ದಾನೆ” ಎಂದಿದ್ದಾರೆ.
ಜಬಲ್ಪುರದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಗೋಪಾಲ್ ಖಂಡೇಲ್ ಮಾತನಾಡಿ ಮಹಾರಾಷ್ಟ್ರ ಪೊಲೀಸರು ಬೆದರಿಕೆ ಹಾಕಿದ್ದಾತನ ಮೊಬೈಲ್ ನಂಬರ್ ನೀಡಿದ್ದರು. ಅದರಿಂದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂದಿದ್ದಾರೆ.