ಬೆಂಗಳೂರು: ಟ್ವಿಟರ್’ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಹಾಕುವುದಾಗಿ ಹುಸಿ ಬೆದರಿಕೆ ಟ್ವೀಟ್ ಮಾಡಿದ ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಕಳೆದ ಡಿ.10ರಂದು ವ್ಯಕ್ತಿಯೊಬ್ಬ ತನ್ನ ಟ್ವಿಟರ್ ಖಾತೆಯಲ್ಲಿ, ನಾನು ಬೆಂಗಳೂರು ಏರ್ ಪೋರ್ಟ್’ಗೆ ಬಾಂಬ್ ಹಾಕುತ್ತೇನೆ ಎಂದು ಇಂಗ್ಲಿಷ್’ನಲ್ಲಿ ಟ್ವೀಟ್ ಮಾಡಿದ್ದ. ಈ ಟ್ವೀಟ್ ಅನ್ನು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್’ಗೂ ಟ್ಯಾಗ್ ಮಾಡಿದ್ದಾನೆ.
ಇದನ್ನು ಗಮನಿಸಿದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಇದು ನಾನ್ ಕಾಗ್ನಿಜಬಲ್ ಕೇಸ್ ಆಗಿರುವುದರಿಂದ, ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿ ಪ್ರಥಮ ಮಾಹಿತಿ ವರದಿಯನ್ನು (ಎಫ್’ಐಆರ್) ದಾಖಲಿಸಲು ಅನುಮತಿ ಕೋರಿದ್ದರು. ಅದರಂತೆ, ಐಪಿಸಿ 505 ಹಾಗೂ 507 ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಪೊಲೀಸ್ ಅಧಿಕಾರಿಗಳು ಸೈಬರ್ ಕ್ರೈಂ ಪೊಲೀಸರ ಜೊತೆ ತನಿಖೆ ಮುಂದುವರೆಸಿದ್ದಾರೆ.