ಬೆಂಗಳೂರು: ಮಾಗಡಿ ಮುಖ್ಯರಸ್ತೆಯ ತಿಪ್ಪಸಂದ್ರದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ರೈತರೊಬ್ಬರು ತಮ್ಮ ಬಲಗೈನ 3 ಬೆರಳುಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಸಂತ್ರಸ್ತ ವ್ಯಕ್ತಿಯನ್ನು ಮಾಗಡಿ ತಾಲೂಕಿನ ಸಿದ್ದಾಪುರ ರೈತ ಗೋಪಾಲಯ್ಯ(45) ಎಂದು ಗುರುತಿಸಲಾಗಿದೆ.
ದನಗಳ ಕರೆ ತರಲು ಹೊಲಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದನದ ಹತ್ತಿರ ಚೆಂಡಿನಂತಹ ವಸ್ತು ಬಿದ್ದಿರುವುದನ್ನು ಕಂಡ ಗೋಪಾಲಯ್ಯ ಅವರು, ಅದನ್ನು ಕೈಯಲ್ಲಿ ಎತ್ತಿಕೊಂಡು ಎಸೆಯಲು ಮುಂದಾಗಿದ್ದಾರೆ.
ಈ ವೇಳೆ ಕಚ್ಚಾ ಬಾಂಬ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗೋಪಾಲಯ್ಯ ಅವರು ಬಲಗೈನ ಮೂರು ಬೆರಳುಗಳನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕಾಡು ಹಂದಿಗಳ ಓಡಿಸಲು ದುಷ್ಕರ್ಮಿಗಳು ಬಾಂಬ್ ಇಟ್ಟಿರುವುದಾಗಿ ಶಂಕಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ದಾಖಲಾದ ಆಸ್ಪತ್ರೆಯು ವೈದ್ಯಕೀಯ-ಕಾನೂನು ಪ್ರಕರಣವನ್ನು ದಾಖಲಿಸಿದೆ. ವ್ಯಕ್ತಿಯ 40 ವರ್ಷದ ಪತ್ನಿ ಹನುಮಕ್ಕ ಅವರು ದೂರು ದಾಖಲಿಸಿದ್ದಾರೆ. “ದಂಪತಿಗಳು ಕಳೆದ ಡಿ.4 ಬೆಳಗ್ಗೆ ತಮ್ಮ ದನಗಳೊಂದಿಗೆ ಹೊಲಕ್ಕೆ ಹೋಗಿದ್ದರು. ನಂತರ ಅಲ್ಲೇ ದನಗಳನ್ನು ಬಿಟ್ಟು ಹಿಂತಿರುಗಿದ್ದರು.
ನಂತರ ಗೋಪಾಲಯ್ಯ ದನಗಳನ್ನು ತರಲು ಮಧ್ಯಾಹ್ನ ಹೊಲಕ್ಕೆ ಹೋಗಿದ್ದಾರೆ. ಸ್ಫೋಟ ಶಬ್ಧ ಕೇಳಿದ ಪತ್ನಿ ಸ್ಥಳಕ್ಕೆ ಬಂದಿದ್ದು, ಗಾಯಗೊಂಡು ಬಿದ್ದಿದ್ದ ಪತಿಯನ್ನು ನೋಡಿದ್ದಾರೆ. ಸ್ಫೋಟದಲ್ಲಿ ಗೋಪಾಲಯ್ಯ ಕೈಬೆರಳುಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ತಿಂಗಳ ಹಿಂದೆ ಹೊಗೇನಕಲ್ ರಸ್ತೆಯಲ್ಲಿ ನಡೆದ ಇದೇ ರೀತಿಯ ಸ್ಫೋಟದಲ್ಲಿ 59 ವರ್ಷದ ಮಹಿಳೆಯೊಬ್ಬರು ತಮ್ಮ ಎಡಗೈಯ ಎಲ್ಲಾ ಬೆರಳುಗಳನ್ನು ಕಳೆದುಕೊಂಡಿದ್ದರು.
ಕೋಡಿಹಳ್ಳಿ, ಕನಕಪುರ, ಮಾಗಡಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರು ನಿತ್ಯವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಅವರಲ್ಲಿ ಕೆಲವರು ಹಸುಗಳನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ, ಮಾಂಸದ ಬಾಲ್ ನಲ್ಲಿ ತುಂಬಿದ ಕಚ್ಚಾ ಬಾಂಬ್ ಅನ್ನು ಕಚ್ಚಿ ಡಾಬರ್ಮ್ಯಾನ್ ನಾಯಿ ಸಾವನ್ನಪ್ಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ