ನವದೆಹಲಿ: ಬಾಲಿವುಡ್ ವಿವಾದಾತ್ಮಕ ನಟಿ ಕಂಗನಾ ರಣಾವತ್ ಗೆ ಸಂಕಷ್ಟ ಎದುರಾಗಿದೆ. ಸಿಖ್ಖರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಖ್ಖರ ಬಗ್ಗೆ ಅಸಹ್ಯಕರ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಮನ್ಸ್ ನೀಡಲಾಗಿದ್ದು, ಡಿಸೆಂಬರ್ 6ರಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಎದುರು ಹಾಜರಾಗುವಂತೆ ನಟಿಗೆ ಸೂಚನೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದನ್ನು ಪ್ರಶ್ನಿಸಿ ಮುಂಬೈನಲ್ಲಿ ಸಿಖ್ಖರು ದೂರು ನೀಡಿದ್ದರು.
ಮುಂಬೈನ ಉದ್ಯಮಿ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಹಾಗೂ ಶಿರೋಮಣಿ ಅಕಾಲಿ ದಳದ ಮುಖಂಡರು ನಟಿ ಕಂಗನಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. “ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ವರ್ಷ ಪೂರ್ತಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಎಂದು ನಟಿ ಬಿಂಬಿಸಿದ್ದಾರೆ. ಅಲ್ಲದೇ ರೈತರನ್ನು ಖಲಿಸ್ತಾನಿಗಳು ಎಂದು ಕರೆದಿದ್ದಾರೆ,” ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ನಿಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2021ರ ನವೆಂಬರ್ 20ರಂದು ನೀವೇ ಬರೆದುಕೊಂಡಿದ್ದೀರಿ ಎಂದು ಹೇಳಲಾದ ಅತಿರೇಕದ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕುರಿತು ಹಲವು ದೂರುಗಳನ್ನು ಸಮಿತಿಯು ಸ್ವೀಕರಿಸಿದೆ” ಎಂದು ಸಮಿತಿಯು ತನ್ನ ಉಪ ಕಾರ್ಯದರ್ಶಿಯವರು ರಣಾವತ್‌ಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಕಂಗನಾ ರಣಾವತ್ “ಖಲಿಸ್ತಾನಿ ಭಯೋತ್ಪಾದಕರು ಎಂದು (ಸಿಖ್ಖರು) ಕಂಬಳಿಪಟ್ಟಿ… ಎಂದು ಬರೆದುಕೊಂಡಿರುವುದು ಇಡೀ ಸಿಖ್ ಸಮುದಾಯಕ್ಕೆ ನೋವು ಮತ್ತು ಅವಮಾನ ಮಾಡಿದಂತಾಗಿದೆ,” ಎಂದು ಸಮನ್ಸ್ ಡಾಕ್ಯುಮೆಂಟ್ ಹೇಳಿದೆ.