ಮುಂಬೈ: ಹಿರಿಯ ರಂಗಭೂಮಿ, ಕಿರುತೆರೆ ಮತ್ತು ಬಾಲಿವುಡ್ ನಟ ವಿಕ್ರಮ್ ಗೋಖಲೆ ಶನಿವಾರ ಪುಣೆಯಲ್ಲಿ ನಿಧನರಾದರು.
ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಬುಧವಾರ ಸಂಜೆ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ.
ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹಿಂದಿ ಮತ್ತು ಮರಾಠಿ ಮನರಂಜನಾ ಉದ್ಯಮದ ಅನುಭವಿಯಾಗಿರುವ ಅವರು ಅಮಿತಾಭ್ ಬಚ್ಚನ್ ಅಭಿನಯದ ಅಗ್ನಿಪಥ್ ಮತ್ತು 1999 ರಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರು.