ಬೆಂಗಳೂರು: ಹಿಂದೊಮ್ಮೆ ಬೆಂಗಳೂರಿನ ಆಕರ್ಷಣೆಯಾಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಈ ವರ್ಷಾಂತ್ಯದ ವೇಳೆಗೆ ನಗರದಲ್ಲಿ ಮತ್ತೆ ಸಂಚಾರ ಆರಂಭಿಸಲಿವೆ.
ಜೂನ್ ತಿಂಗಳಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದ ಸುಮಾರು ಎರಡು ತಿಂಗಳ ನಂತರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಟೆಂಡರ್ ಕರೆಯಲು ಸಜ್ಜಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಿಎಂಟಿಸಿ ಈ ಹಿಂದೆ ಐದು ಡಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗಾಗಿ ಟೆಂಡರ್ ಕರೆದಿತ್ತು. ಬಿಡ್ಡರ್ಗಳು ಹೆಚ್ಚಿನ ಬೆಲೆ ಘೋಷಿಸಿದ್ದರು. ಹೀಗಾಗಿ ಮರು ಟೆಂಡರ್‌ಗೆ ಹೋಗಲು ಸಂಪುಟವು ನಿರ್ಧರಿಸಿತು ಮತ್ತು ಹತ್ತು ಡಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದೃಢಪಡಿಸಿರುವುದಾಗಿ ತಿಳಿದುಬಂದಿದೆ.
ನಿಗಮವು ಟೆಂಡರ್ ವಿವರಗಳನ್ನು ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿದ್ದಾರೆ. ಅಶೋಕ್ ಲೇಲ್ಯಾಂಡ್‌ನ ಸ್ವಿಚ್ ಮೊಬಿಲಿಟಿ ಹೊರತುಪಡಿಸಿ, ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸಲು ಸದ್ಯ ಯಾರೂ ಇಲ್ಲ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಿಖರ ಮಾಹಿತಿ ನೀಡಲಾಗುವುದು. ಶೀಘ್ರದಲ್ಲೇ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಸಚಿವರು ತಿಳಿಸಿದ್ದಾರೆ.