ಬಿಎಂಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಡಿಪೋ ಮೇಲಾಧಿಕಾರಿಗಳ ಕಿರುಕುಳವೇ ಕಾರಣ: ಕುಟುಂಬಸ್ಥರ ಆರೋಪ

Prasthutha|

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಚಾಲಕನೊಬ್ಬ ಬಸ್ ಡಿಪೋ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ರಾಜರಾಜೇಶ್ವರಿನಗರ ಪೊಲೀಸರು ತೀವ್ರಗೊಳಿಸಿದ್ದಾರೆ.

- Advertisement -

ರಾಜರಾಜೇಶ್ವರಿ ನಗರದ ಡಿಪೋ 21 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಬಿಎಂಟಿಸಿ ಚಾಲಕ ಹೊಳೆಬಸಪ್ಪ (49). ನಿನ್ನೆ ಬೆಳಗ್ಗೆ ಕರ್ತವ್ಯ ನಿರ್ವಹಿಸಲು ಡಿಪೋಗೆ ಹೋಗಿದ್ದಾರೆ.

ಆದರೆ, ಕರ್ತವ್ಯಕ್ಕೆ ಹಾಜರಾಗದೇ, ಡಿಪೋ ಆವರಣದಲ್ಲಿರುವ ಡೀಸೆಲ್ ಬಂಕ್ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ 12.20ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಪೋ ಮೇಲಾಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರಜಾ ಮತ್ತು ನಾನಾ ಕಾರಣಗಳಿಂದ ಡಿಪೋ ಮ್ಯಾನೇಜರ್ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಈ ನಡುವೆ ಮ್ಯಾನೇಜರ್ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರ್ ಆರ್ ನಗರ ಪೋಲಿಸ್ ಠಾಣೆಯಲ್ಲಿ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ ವಿರುದ್ಧ ಪತ್ನಿ ಸೀಮಾ ದೂರು ನೀಡಿದ್ದು, ಬಿಎಂಟಿಸಿ ಡಿಪೋ ಮ್ಯಾನೇಜರ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ

ಮ್ಯಾನೇಜರ್ ಕಿರುಕುಳದಿಂದಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಬಸಪ್ಪ ಸಾವನ್ನಪ್ಪಿದ್ದಾನೆ. ಪೋಸ್ಟ್ ಮಾರ್ಟಂ ಮಾಡುವ ವೇಳೆ ಬಸಪ್ಪನ ಒಳಉಡುಪಿನಲ್ಲಿ ಸಿಕ್ಕ ಡೆತ್ ನೋಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 

ಪ್ರಕರಣ ನಡೆದಾಗಿನಿಂದ ಕೇಸ್ ವಾಪಸು ಪಡೆಯುವಂತೆ ಪತ್ನಿ ಸೀಮಾಗೆ ಬಿಎಂಟಿಸಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಯಾವುದೇ ಪರಿಹಾರವಿಲ್ಲ ಎಂದು ಅಧಿಕಾರಿಗಳು ಸೀಮಾಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.



Join Whatsapp