ಬ್ಯಾರಿ ಸಂಸ್ಕೃತಿಯ ಅದ್ವಿತೀಯ ಸಂಶೋಧಕ ಪ್ರೊ.ಬಿ.ಎಂ.ಇಚ್ಲಂಗೋಡು

Prasthutha|

ಸಂದರ್ಶನ: ಎಸ್.ಕೆ.ಮಠ

- Advertisement -

ಪ್ರಸ್ತುತ: ಬ್ಯಾರಿ ಸಮುದಾಯ ಮತ್ತು ಭಾಷೆಯ ಬಗ್ಗೆ ಅಧ್ಯಯನ ನಡೆಸಲು ಪ್ರೇರಣೆಯಾದ ಅಂಶಗಳೇನು?

ಇಚ್ಲಂಗೋಡು: 1963ರಲ್ಲಿ ನಾನು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಎ ವಿದ್ಯಾರ್ಥಿಯಾಗಿದ್ದಾಗ ಗುರುಗಳಾಗಿದ್ದ ಡಾ.ಗುರುರಾಜ ಭಟ್ಟರು ನೀನು ಬ್ಯಾರಿಯೇ ಎಂದು ಪ್ರಶ್ನಿಸಿದರು. ನಾನು ಹೌದು ಎಂದು ಉತ್ತರಿಸಿದೆ. ಆಗ ಅವರು ಬ್ಯಾರಿಗಳು ಯಾರು? ಮುಸ್ಲಿಮರಲ್ಲಿರುವ ಒಂದು ಕೀಳ್ಜಾತಿ ವರ್ಗವೇ? ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದಾಗಲಿಲ್ಲ. ನಾನು ಮೌನವಾದುದನ್ನು ನೋಡಿ ಅವರು, ಬ್ಯಾರಿಗಳಲ್ಲಿ ಕೀಳರಿಮೆ ಇದೆ. ನೀನದನ್ನು ಹೋಗಲಾಡಿಸಬೇಕು. ಮುಂದೆ ಬ್ಯಾರಿಗಳ ಮೂಲ, ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸಬೇಕು ಎಂದು ಹೇಳಿದರು. ಇದೇ ಮುಂದೆ ನನ್ನನ್ನು ಅಧ್ಯಯನ ನಡೆಸಲು ಪ್ರೇರೇಪಿಸಿತು.

- Advertisement -

ಪ್ರಸ್ತುತ: ನಿಜವಾಗಿಯೂ ಬ್ಯಾರಿಗಳ ಮೂಲ ಯಾವುದು ಮತ್ತು ಅವರ ಇತಿಹಾಸ ಎಲ್ಲಿಂದ ಆರಂಭಗೊಳ್ಳುತ್ತದೆ?

ಇಚ್ಲಂಗೋಡು: ರೋಮ್ ಸಾಮ್ರಾಜ್ಯದ ಪತನಾನಂತರ ಅರಬರು ಸಾಗರ ಸಂಪರ್ಕದಲ್ಲಿ ಪ್ರಸಿದ್ಧಿ ಪಡೆದು, ಅಗರ್ತಸಿಡೀಸನ ಕಾಲದಲ್ಲೇ ಮಲಬಾರು ಕರಾವಳಿಗೆ ಬಂದಿದ್ದರು. ಪೆರಿಪ್ಲಸನು ಕ್ರಿಸ್ತಶಕ ಒಂದನೇ ಶತಮಾನದಲ್ಲೇ ಅರಬರು ಮಲಬಾರು ಕರಾವಳಿಯೊಂದಿಗೆ ಸಂಪರ್ಕ ಹೊಂದಿದ್ದನ್ನು ತಿಳಿಸಿದ್ದಾನೆ. ಅಂದಿನಿಂದ ಪೋರ್ಚುಗೀಸರ ಆಗಮನದವರೆಗೂ ಭಾರತದ ಕರಾವಳಿಯ ವ್ಯಾಪಾರ ಅರಬರ ಸ್ವಾಯತ್ತತೆಗೆ ಒಳಗಾಗಿತ್ತು. ಕ್ರಿಸ್ತಶಕ ಏಳನೇ ಶತಮಾನದಲ್ಲಿ ಅರೇಬಿಯಾದಲ್ಲಿ ಇಸ್ಲಾಮ್ ಪ್ರಚಾರಗೊಂಡಿತು. ಅರಬರು ಮುಸ್ಲಿಮರಾದರು. ಕರಾವಳಿಯ ಮಹಿಳೆಯರನ್ನು ಅರಬರು ಮದುವೆಯಾದ ಕಾರಣ ಇಲ್ಲಿ ಒಂದು ಹೊಸ ವರ್ಗ ಸೃಷ್ಟಿಯಾಯಿತು. ಪ್ರಾದೇಶಿಕ ಸಂಸ್ಕೃತಿಗನುಸಾರ ಬೇರೆ ಬೇರೆ ಹೆಸರುಗಳಿಂದ ಅವರು ಕರೆಯಲ್ಪಟ್ಟರು. ಕೊಂಕಣಿ ಕರಾವಳಿಯ ಕೊಂಕಣಿ ಭಾಷೆಯನ್ನಾಡುವ ಮುಸ್ಲಿಮರು ನವಾಯಿತರೆಂದೂ, ತುಳುನಾಡ ಕರಾವಳಿಯ ತುಳು ಭಾಷೆ ಪ್ರಭಾವದ ಬ್ಯಾರಿ ಭಾಷೆಯನ್ನಾಡುವ ಜನರು ಬ್ಯಾರಿಗಳೆಂದೂ, ಮಲಬಾರು ಕರಾವಳಿಯ ಮಲಯಾಳ ಭಾಷೆಯನ್ನಾಡುವ ಮುಸ್ಲಿಮರು ಮಾಪಿಳ್ಳೆಯರೆಂದೂ, ಕೋರಮಂಡಲ ಕರಾವಳಿಯ ತಮಿಳು ಮುಸ್ಲಿಮರು ಲಬ್ಬೈಗಳೆಂದೂ ಕರೆಯಲ್ಪಟ್ಟರು. ಬ್ಯಾರಿ ಪದ ಬಳಕೆ ಕರಾವಳಿಯ ಮುಸ್ಲಿಮರಿಗೆ ಬಹು ಕಾಲದಿಂದಲೂ ಇತ್ತು. 1881, 1891ರ ಕೋಚುಮನ್ ಸಮೀಕ್ಷೆ (Couchman Survey) ದಾಖಲೆಗಳಲ್ಲಿ ಕಾಣಬಹುದು. ಈ ಭಾಷೆಯ ಮೂಲವನ್ನು ಹುಡುಕುತ್ತಾ ಹೋದಾಗ, ಅದು ಮಲಯಾಳ ಭಾಷೆಗಿಂತಲೂ ಪ್ರಾಚೀನವಾದದ್ದು. ಮೂಲತಃ ಮಲೆಯಾಲ್ಮೆ ಭಾಷೆಯೇ ತಮಿಳು, ಮಲಯಾಳ ಭಾಷಾ ಮೂಲವೆಂದೂ ಇತಿಹಾಸ ತಿಳಿಸುತ್ತದೆ.

ಪ್ರಸ್ತುತ: ಬ್ಯಾರಿ ಜನಾಂಗದ ಹಿನ್ನೆಲೆಯ ಬಗ್ಗೆ ಅಧ್ಯಯನ ನಡೆಸುವಾಗ ಎದುರಿಸಿದ ಸವಾಲುಗಳೇನು?

ಇಚ್ಲಂಗೋಡು: ಮೊದಲ ಬಾರಿಗೆ 1985 ಸೆಪ್ಟಂಬರ್ 1ರಂದು ಉದಯವಾಣಿಯಲ್ಲಿ ನಾನು ಬರೆದ ‘ಬ್ಯಾರಿ ಭಾಷೆ’ ಬ್ಯಾರಿಗಳ ಆಡು ಭಾಷೆ ಎಂಬ ವಿವರಣಾತ್ಮಕ ಲೇಖನ ಪ್ರಕಟವಾಯಿತು. ಆದರೆ ಈ ಲೇಖನವನ್ನು ವಿರೋಧಿಸಿ ಬೆದರಿಕೆಯ ರೂಪದಲ್ಲಿ ಸುಮಾರು 12 ಪತ್ರಗಳು ನನಗೆ ಅಂಚೆ ಮೂಲಕ ಬಂದವು. ಪತ್ರ ಬರೆದವರಲ್ಲಿ ವಕೀಲರು, ಊರಿನ ಹಿರಿಯರೂ ಸೇರಿದ್ದರು. ಬ್ಯಾರಿಗಳ ಬಗ್ಗೆ ಬರೆಯುವುದನ್ನು ನಿಲ್ಲಿಸಿ, ನೀವು ಬೇಕಾದರೆ ಬ್ಯಾರಿ ಎಂದು ಬರೆದುಕೊಳ್ಳಿ, ಸಮುದಾಯದ ಬಗ್ಗೆ ಬರೆಯಬೇಡಿ ಎಂದು ಕೆಲವು ವಿದ್ಯಾವಂತರೇ ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಬ್ಯಾರಿ ವೆಲ್ಫೇರ್‌ ನಂತಹ ಸಂಘಟನೆಗಳು ನನ್ನ ಬೆಂಬಲಕ್ಕೆ ನಿಂತವು. ಅದುವರೆಗೆ ಕರಾವಳಿ ಮುಸ್ಲಿಮರು ಸರಕಾರಿ ದಾಖಲೆಗಳಲ್ಲಿ ಜಾತಿ ಎಂಬಲ್ಲಿ ಮಾಪಿಳ್ಳೆ ಎಂದೂ, ಭಾಷೆ ಎಂಬ ಕಲಂನಲ್ಲಿ ಮಲಯಾಳಂ ಎಂದು ನಮೂದಿಸುತ್ತಿದ್ದರು. ಈ ಸಂದರ್ಭದಲ್ಲಿ ಬ್ಯಾರಿ ಸಂಸ್ಕೃತಿಯ ಬಗ್ಗೆ ಅಧ್ಯಯನಕ್ಕೆ ತೀರ್ಮಾನಿಸಿದೆ. ಕಾಸರಗೋಡಿನಿಂದ ಬೈಂದೂರಿನ ವರೆಗೆ ಪ್ರಮುಖ ಊರುಗಳಿಗೆ ಅಲೆದಾಡಿ 45ಕ್ಕೂ ಅಧಿಕ ಹಳ್ಳಿಗಳನ್ನು ಸಂದರ್ಶಿಸಿದೆ. ನೂರಾರು ಗ್ರಂಥಗಳನ್ನು ತಡಕಾಡಿದೆ. 75ಕ್ಕೂ ಅಧಿಕ ಹಿರಿಯರನ್ನು ಸಂದರ್ಶಿಸಿದೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧೂಳು ತುಂಬಿದ ದಾಖಲೆಗಳನ್ನು ಮೂರುವರೆ ತಿಂಗಳ ಕಾಲ ಪರಿಶೀಲಿಸಿದೆ. 1819ರಲ್ಲಿ ನಡೆಸಿದ್ದ ಜನಗಣತಿ ಅಲ್ಲಿ ದೊರೆಯಿತು. ಅದರಿಂದ ಹೆಚ್ಚಿನ ಮಾಹಿತಿ ಲಭ್ಯವಾಯಿತು.

ಪ್ರಸ್ತುತ: ಬ್ಯಾರಿ ಭಾಷೆಗೆ ಈಗ ಲಿಪಿಯ ಅಗತ್ಯವಿದೆಯೇ?

ಇಚ್ಲಂಗೋಡು: ಯಾವುದೇ ಭಾಷೆಗೆ ಲಿಪಿ ಅನಿವಾರ್ಯವಲ್ಲ. ವಿಶ್ವಾದ್ಯಂತ ಬಳಕೆಯಾಗುವ ಇಂಗ್ಲಿಷ್ ಭಾಷೆಗೆ ಸ್ವಂತ ಲಿಪಿ ಇಲ್ಲ. ರೋಮನ್ ಲಿಪಿಯೇ ಬಳಕೆಯಾಗುತ್ತದೆ. ಬ್ಯಾರಿಯನ್ನು ಇದುವರೆಗೆ ಕನ್ನಡದಲ್ಲೇ ಬರೆಯಲಾಗಿದೆ. ಇದರಿಂದ ಬ್ಯಾರಿಗಳಿಗೆ ಕನ್ನಡ ಭಾಷೆಯ ಮೇಲೆ ಹಿಡಿತ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾರಿ ಭಾಷೆಗೆ ಪ್ರತ್ಯೇಕ ಲಿಪಿ ಬಳಸುವುದು ಸರಿಯಲ್ಲ. ಚೈನೀಸ್ ಮಾದರಿಯ ಈ ಬ್ಯಾರಿ ಲಿಪಿಯನ್ನು ಕಲಿಯುವವರು ಯಾರು? ಅದರಿಂದ ಏನು ಪ್ರಯೋಜನ? ನನ್ನ ಮಾಹಿತಿ ಪ್ರಕಾರ, ವ್ಯಕ್ತಿಯೊಬ್ಬರು ತುಳು ಭಾಷೆಗೆ ತಯಾರಿಸಿದ ಲಿಪಿಯನ್ನು ತಂದು ಮಂಗಳೂರಿನ ತುಳು ಅಕಾಡೆಮಿ ಅಧ್ಯಕ್ಷರಿಗೆ ಕೊಟ್ಟಾಗ ಅವರು ಅದನ್ನು ತಿರಸ್ಕರಿಸಿದರು. ಬಳಿಕ ಆ ವ್ಯಕ್ತಿ ನೇರವಾಗಿ ಬ್ಯಾರಿ ಅಕಾಡೆಮಿಗೆ ಅದನ್ನು ನೀಡಿದ್ದಾರೆ. ಅಕಾಡೆಮಿಯವರು ಯಾವುದೇ ಚರ್ಚೆ ನಡೆಸದೆ ಅದನ್ನು ನೇರವಾಗಿ ಅಂಗೀಕರಿಸಿದರು. (ನಗು) ಈ ಲಿಪಿಯಿಂದ ಯಾರಿಗೂ ಲಾಭವಿಲ್ಲ.

ಪ್ರಸ್ತುತ: ದಿವ್ಯದರ್ಶನ ಮತ್ತು ಇನ್ನಿತರ ಸಾಹಿತ್ಯ ಕೃತಿಗಳ ಕುರಿತು?

ಇಚ್ಲಂಗೋಡು: 30 ವರ್ಷಗಳ ಕಾಲ ‘ತವ ನಿಧಿ’ ಎಂಬ ಮಾಸಿಕವನ್ನು ನಡೆಸಿದೆ. ಬಹುಶಃ ಇದು ಕನ್ನಡದಲ್ಲಿ ಮೊದಲ ಇಸ್ಲಾಮೀ ಮಾಸಿಕವಾಗಿದೆ. ಧಾರ್ಮಿಕ ಶಿಕ್ಷಣ ಪಡೆದಿದ್ದರಿಂದ ಕುರ್ಆನ್ ಅನ್ನು ಕನ್ನಡಕ್ಕೆ ಅನುವಾದಿಸಿದೆ. ‘ದಿವ್ಯದರ್ಶನ: ಪವಿತ್ರ ಕುರ್ಆನ್ ಕಾವ್ಯಾನುವಾದ’ ಎಂಬ ಕೃತಿಯನ್ನು ಹೊರತಂದೆ. ಇದಕ್ಕೆ 1975ರಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತು. ಇದು ಕನ್ನಡದ ಮೊದಲ ಕುರ್ಆನ್ ಗ್ರಂಥವಾಗಿದೆ. ಈ ವೇಳೆ ಮುಸ್ಲಿಮ್ ಧರ್ಮಗುರುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕುರ್ಆನ್ ಅನ್ನು ಕನ್ನಡದಲ್ಲಿ ಬರೆಯುವಂತಿಲ್ಲ ಎಂದು ನಾಡಿನ ಶ್ರೇಷ್ಠ ವಿದ್ವಾಂಸರೊಬ್ಬರು ಫತ್ವಾ ನೀಡಿದ್ದರು. ಆದರೆ ಕಾಲಕ್ರಮೇಣ ಅದೇ ವಿದ್ವಾಂಸರ ಶಿಷ್ಯಂದಿರು ಕನ್ನಡದಲ್ಲಿ ಕುರ್ಆನ್ ಗ್ರಂಥ ಬರೆದಾಗ ಅದರ ಕರಡು ಪ್ರತಿ ತಿದ್ದುವಿಕೆಗಾಗಿ ನನ್ನಲ್ಲಿಗೆ ಬಂದರು. ಆ ಕೆಲಸವನ್ನೂ ಮಾಡಿಕೊಟ್ಟೆ. ಕೊನೆಗೆ ಕೃತಿಯ ಬಿಡುಗಡೆಗೂ ನನ್ನನ್ನು ಆಹ್ವಾನಿಸಿ ಗೌರವಿಸಿದರು. ಆ ವಿದ್ವಾಂಸರು ಕೊನೆಯವರೆಗೂ ನನ್ನನ್ನು ಸ್ಮರಿಸುತ್ತಿದ್ದರು. ಇಸ್ಲಾಮಿನ ಸತ್ಯದರ್ಶನ, ವೈದ್ಯ-ರೋಗಿ ಸಂಬಂಧ, ಅಂತರಾಳದ ಗೀತೆಗಳು, ಬ್ಯಾರಿ ಭಾಷೆ ದ್ರಾವಿಡ ಭಾಷೆಯೇ?, ನೂಲ್ ಮೊಲಿ-ಬ್ಯಾರಿ ಚೊಲ್ತುರೊ ಬುಕ್, ತುಳುನಾಡಿನ ಮುಸ್ಲಿಮರು ಸೇರಿದಂತೆ 35ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದೇನೆ.

ಪ್ರಸ್ತುತ: ಸೌಹಾರ್ದತೆ ಮತ್ತು ಭ್ರಾತೃತ್ವಕ್ಕೆ ಹೆಸರುವಾಸಿಯಾಗಿದ್ದ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಕೋಮು ದ್ವೇಷ ಹೆಚ್ಚಾಗುತ್ತಿದೆ, ಈ ಬಗ್ಗೆ ಏನನ್ನುತ್ತೀರಿ?

ಇಚ್ಲಂಗೋಡು: ಶಾಂತಿಯ ನೆಲೆಬೀಡಾದ ಕರಾವಳಿ ಜಿಲ್ಲೆಗಳಲ್ಲಿ ದ್ವೇಷ ಮತ್ತು ಅಪನಂಬಿಕೆ ಹೆಚ್ಚಾಗಿರುವುದು ದುರದೃಷ್ಟಕರ. ಹಿಂದೆ ನನ್ನ ಹುಟ್ಟೂರಾದ ಇಚ್ಲಂಗೋಡಿನಲ್ಲಿ ಉರೂಸ್‌ ದಿನಾಂಕ ನಿಗದಿಪಡಿಸುವಾಗ ಅಲ್ಲಿನ ನಾಲ್ಕು ಹಿಂದೂ ಗುತ್ತು ಕುಟುಂಬಗಳ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಪಾಲ್ಗೊಂಡು ದಿನಾಂಕ ಸೂಚಿಸುತ್ತಿದ್ದರು. ಅದೇ ರೀತಿ ಜಾತ್ರೆ, ದೇವಸ್ಥಾನದ ಇನ್ನಿತರ ಕಾರ್ಯಕ್ರಮಗಳಿಗೂ ಮುಸ್ಲಿಮರಿಗೆ ಆಹ್ವಾನ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇವು ಮಾಯವಾಗಿ ಹಿಂದೂ-ಮುಸ್ಲಿಮರ ನಡುವೆ ಅಪನಂಬಿಕೆ ಉಂಟಾಗಿದೆ. ಇದನ್ನು ಹೋಗಲಾಡಿಸಲು ಎರಡೂ ಸಮುದಾಯಗಳ ಮುಖಂಡರು, ಧಾರ್ಮಿಕ ನಾಯಕರು ಮುಂದಾಗಬೇಕು.

ಪ್ರಸ್ತುತ: ಮದ್ರಸ ವ್ಯವಸ್ಥೆ ಸುಧಾರಣೆಗೆ ಯಾವ ಸಲಹೆ ನೀಡುತ್ತೀರಿ?

ಇಚ್ಲಂಗೋಡು: ಮದ್ರಸ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಅಗತ್ಯವಿದೆ. ಮದ್ರಸ ಅಧ್ಯಾಪಕರು ಮತ್ತು ಮಸೀದಿಯ ಖತೀಬರ ನೇಮಕಕ್ಕೆ ಕೇಂದ್ರೀಕೃತ ವ್ಯವಸ್ಥೆ ರೂಪಿಸಬೇಕು. ಉಸ್ತಾದರ ನೌಕರಿಗೆ ಖಾತರಿ ನೀಡಿ, ಗೌರವಯುತ ಸಂಬಳ ಪಾವತಿಸಬೇಕು. ಉಸ್ತಾದರನ್ನು ಏಕಾಏಕಿ ವಜಾಗೊಳಿಸುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವುದು ಒಳಿತು.

ಪ್ರಸ್ತುತ: ಬಾಲ್ಯ ಮತ್ತು ವೃತ್ತಿ ಜೀವನದ ಬಗ್ಗೆ ವಿವರಿಸುವಿರಾ?

ಇಚ್ಲಂಗೋಡು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಚ್ಲಂಗೋಡಿನಲ್ಲಿ ಮುಗಿಸಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್‌ ನಲ್ಲಿ ಪಿಯುಸಿ, ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜೀನಲ್ಲಿ ಬಿ.ಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ, ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಬಿಎಲ್ ಪದವಿ ಗಳಿಸಿದೆ. ಉಡುಪಿಯ ಎಂ.ಜಿ.ಎಂ ಕಾಲೇಜು, ಮಂಗಳೂರಿನ ಸೈಂಟ್ ಆ್ಯಗ್ನೇಸ್ ಕಾಲೇಜು, ಮೂಡಬಿದಿರೆಯ ಮಹಾವೀರ ಕಾಲೇಜು, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನಿವೃತ್ತಿಯ ಬಳಿಕ ಗ್ರಾಹಕ ಹಕ್ಕುಗಳ ಹೋರಾಟದಲ್ಲಿ ನಿರತವಾಗಿದ್ದು, 30 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದ್ದೇನೆ. ಕಾವ್ಯಾನುವಾದ ರಾಷ್ಟ್ರಪ್ರಶಸ್ತಿ, ಸಾಹಿತ್ಯ ಸೇವಾ ಸನ್ಮಾನ, ಮುಸ್ಲಿಮ್ ಲೇಖಕರ ಸಂಘದ ವರ್ಷದ ಹಿರಿಯ ಸಾಹಿತಿ ಪ್ರಶಸ್ತಿ, ಮಾಧ್ಯಮ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಕುರ್ಆನ್ ವ್ಯಾಖ್ಯಾನ ಕಾರ್ಯದಲ್ಲಿ ತೊಡಗಿದ್ದೇನೆ. ಅದೇ ರೀತಿ ಇಸ್ಲಾಮಿನ ಸತ್ಯದರ್ಶನ ಕೃತಿಯನ್ನು ಪರಿಷ್ಕರಿಸಿ ಸಮಗ್ರವಾಗಿ ಹೊರತರುವ ಯೋಜನೆ ಹಾಕಿಕೊಂಡಿದ್ದೇನೆ.



Join Whatsapp