ಮುಸ್ಲಿಮ್ ಅಭ್ಯರ್ಥಿಗಳನ್ನು ಸೋಲಿಸಲು ಕುತಂತ್ರ ನಡೆಸುವ ಕಾಂಗ್ರೆಸ್ ನ ನಿಜ ಸ್ವರೂಪ ಬಯಲು: ಬಿ.ಎಂ.ಫಾರೂಕ್

Prasthutha|

ಬೆಂಗಳೂರು: ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಸೋಲಿಸಲು ಕುತಂತ್ರ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ನಿಜ ಸ್ವರೂಪವನ್ನು ಬಯಲು ಮಾಡಿದೆ. ಮುಸ್ಲಿಮರಲ್ಲಿ ಹೊಸ ನಾಯಕತ್ವ ಉದಯಿಸುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ ಎನ್ನುವುದು ಫಲಿತಾಂಶದಿಂದ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಎಂ. ಫಾರೂಕ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ನ ಮುಸ್ಲಿಮ್ ನಾಯಕರು ವಕ್ಫ್ ಆಸ್ತಿ ಕಬಳಿಸುವುದು, ಐಎಂಎ ಹಗರಣ, ಅಮಾನತ್ ಬ್ಯಾಂಕ್ ದಿವಾಳಿ ಮುಂತಾದ ಪ್ರಕರಣಗಳಿಂದ ಮುಸ್ಲಿಮರ ಮಧ್ಯೆ ಕುಖ್ಯಾತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಸ್ಲಿಮರ ಹೊಸ ಪೀಳಿಗೆಯ ಪ್ರಾಮಾಣಿಕ ನಾಯಕರನ್ನು ಬೆಳೆಸಲು ಯತ್ನಿಸಿದೆ. ಹಾಗೆಂದೇ ಸಿಂಧಗಿ ಮತ್ತು ಹಾನಗಲ್ ನಲ್ಲಿ ಹೊಸ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಜಮೀರ್ ಖಾನ್ , ಸಿದ್ದರಾಮಯ್ಯ ಮುಂತಾದವರಿಗೆ ಇದನ್ನು ಸಹಿಸಲು ಸಾಧ್ಯವಾಗಿಲ್ಲ. ಬಿಜೆಪಿ ಜೊತೆಗೆ ರಹಸ್ಯ ಒಪ್ಪಂದ ಮಾಡಿಕೊಂಡು ಅವರು ಮುಸ್ಲಿಮ್ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಸುಳ್ಳು ಪ್ರಚಾರದ ಮೂಲಕ ಅಲ್ಪಸಂಖ್ಯಾತ ಮತದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.


ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಪಕ್ಷದ ನೀತಿಯಂತೆ ಮುಂದಿನ ಚುನಾವಣೆಗಳಲ್ಲೂ ಹೊಸ ಮುಸ್ಲಿಮ್ ಯುವ ನಾಯಕತ್ವ ಬೆಳೆಸಲು ನಿರ್ಧರಿಸಿದ್ದಾರೆ. ಸೋಲು- ಗೆಲುವು ಚುನಾವಣೆಯಲ್ಲಿ ಸಹಜ. ಸಿಂಧಗಿಯಲ್ಲಿ ಜೆಡಿಎಸ್ ಪಕ್ಷದ ನಾಯಕರನ್ನು ಪಕ್ಷಾಂತರ ಮಾಡಿಸಿ ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದ ಕಾಂಗ್ರೆಸ್ ನಾಯಕರಿಗೆ ಅಲ್ಲಿನ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಪಕ್ಷ ಅತ್ಯಧಿಕ ಮತದಿಂದ ಸಿಂದಗಿಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಅವರ ಕುತಂತ್ರವೇ ಕಾರಣ. ಇಲ್ಲಿ ತಮ್ಮ ಸಮುದಾಯದ ಅಪಾರ ಮತಗಳನ್ನು ಸಿದ್ದರಾಮಯ್ಯನವರು ಬಿಜೆಪಿ ಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

- Advertisement -


ಸೋಲಿನಿಂದ ಜೆಡಿಎಸ್ ನಾಯಕರು ದೃತಿಗೆಟ್ಟಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಹೊಸ ಯುವ ಅಭ್ಯರ್ಥಿಗಳನ್ನು ತಯಾರು ಮಾಡುತ್ತೇವೆ. ಪಕ್ಷವನ್ನು ತಳಮಟ್ಟದಿಂದ ಪ್ರಬಲಗೊಳಿಸುತ್ತೇವೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

Join Whatsapp