ಫೈಝಲ್ ನಗರ: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಹಾಗೂ ಮಾಸ್ಕ್ ವಿತರಣಾ ಕಾರ್ಯಕ್ರಮ ಫೈಝಲ್‌ನಗರದಲ್ಲಿ ನಡೆಯಿತು.
ಫೈಝಲ್‌ನಗರ ಗೌಸಿಯಾ ಜುಮಾ ಮಸೀದಿಯ ಖತೀಬರಾದ ದಾವೂದ್ ಹಕೀಂ ಹನೀಫಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದಿನನಿತ್ಯ ಹಲವಾರು ರೋಗಗಳ ಚಿಕಿತ್ಸೆ, ಅಪಘಾತ ಸಂದರ್ಭ ಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ರಕ್ತದಾನ ಶಿಬಿರಗಳ ಆಯೋಜನೆಯಿಂದ ರಕ್ತದ ಕೊರತೆ ನಿವಾರಿಸುವುದು ಸಾಧ್ಯ ಎಂದು ಅಭಿಪ್ರಾಯಪಟ್ಟರು. ರೆಡ್‌ಕ್ರಾಸ್ ಸೊಸೈಟಿಯ ಅಧಿಕಾರಿ, ವೈದ್ಯರು ಮಾತನಾಡಿ ರಕ್ತದಾನದ ಅವಶ್ಯಕತೆ ಹಾಗೂ ರಕ್ತ ಅಗತ್ಯ ಬೀಳುವ ವಿವಿಧ ಸಂದರ್ಭಗಳ ಕುರಿತು ತಿಳಿಸಿದರು.
ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ತ್ವಲ್‌ಹತ್ ತಂಙಳ್ ಫೈಝಲ್‌ನಗರ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ಲೋಗೋ ಅನಾವರಣಗೊಳಿಸಲಾಯಿತು. ಕಾಂಗ್ರೆಸ್‌ನ ಯುವ ಮುಖಂಡ ಮಿಥುನ್ ರೈ, ಮಾಜಿ ಮೇಯರ್ ಕೆ.ಅಶ್ರಫ್, ಪ್ರವೀಣ್, ಜಬ್ಬಾರ್ ಮಾರಿಪಳ್ಳ, ಕಾರ್ಪೊರೇಟರ್ ಅಶ್ರಫ್, ಹುಸೇನ್ ಕಾಟಿಪಳ್ಳ, ಜಲೀಲ್ ಕೃಷ್ಣಾಪುರ, ಸುನಿಲ್ ಕುಮಾರ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ರವೂಫ್, ಅರ್ಷದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.