ಬೆಂಗಳೂರು: ಅಂಧರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಭಾರತೀಯ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.
2012, 2017ರಲ್ಲಿ ನಡೆದ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಭಾರತ ಅಂಧರ ಕ್ರಿಕೆಟ್ ತಂಡ ಮೂರನೇ ಆವೃತ್ತಿಯಲ್ಲೂ ಗೆದ್ದು ಬೀಗಿದೆ. ಈ ಮೂಲಕ ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಅದ್ಭುತ ಸಾಧನೆ ಮಾಡಿರುವ ತಂಡಕ್ಕೆ ಸಚಿವರು ಪ್ರಶಂಸಿಸಿದ್ದಾರೆ.
ಇದೇ ವೇಳೆ ಅಂಧರ ಟಿ-20 ವಿಶ್ವಕಪ್ ಪ್ರಾಯೋಜಕತ್ವ ವಹಿಸಿರುವ ಸಮರ್ಥನಂ ಟ್ರಸ್ಟ್’ಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಂಧರ ಟಿ-20 ವಿಶ್ವಕಪ್ 2012ರಲ್ಲಿ ಮೊದಲ ಸಲ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು, ಅಂದಿನಿಂದಲೂ ಸಮರ್ಥನಂ ಟ್ರಸ್ಟ್ ಪ್ರಾಯೋಜಕತ್ವ ವಹಿಸಿಕೊಳ್ಳುತ್ತ ಬಂದಿದೆ. ಸಮರ್ಥನಂ ಟ್ರಸ್ಟ್’ಗೆ ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಒಂದು ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.