ತುಮಕೂರು : ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಭಾರೀ ಸ್ಫೋಟ ದುರಂತದ ನೆನಪು ಮಾಸುವ ಮೊದಲೇ ಮತ್ತೊಂದು ಭೀಕರ ಸ್ಫೋಟ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಸಂಪೂರ್ಣ ಧ್ವಂಸವಾಗಿರುವ ಘಟನೆ ತುಮಕೂರಿನ ಹೊನ್ನುಡುಕೆ ಸಮೀಪದ ಮಸ್ಕಲ್ ಗ್ರಾಮದಲ್ಲಿ ನಡೆದಿದೆ.
ಸ್ಫೋಟದಲ್ಲಿ ಮನೆ ಸಂಪೂರ್ಣ ನಾಶವಾಗಿದೆ. ಮನೆಯಲ್ಲಿದ್ದವರಿಗೆ ಯಾರಿಗೂ ಯಾವುದೇ ಹಾನಿಗಳಾಗಿಲ್ಲ.
ಲಕ್ಷ್ಮಿಕಾಂತ್ ಎನ್ನುವವರಿಗೆ ಸೇರಿದ ಮನೆ ಇದಾಗಿದ್ದು, ಸ್ಫೋಟದ ಪರಿಣಾಮ ಗೋಡೆಗಳು ಉರುಳಿವೆ. ಘಟನಾ ವೇಳೆ ಲಕ್ಷ್ಮಿಕಾಂತ್ ಅವರ ಪತ್ನಿ ಸುವರ್ಣಮ್ಮ ಮನೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷ್ಮಿಕಾಂತ್ ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದ ವೇಳೆ ಘಟನೆ ನಡೆದಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಿಕಾಂತ್ ಅವರು ಕಲ್ಲುಬಂಡೆಗಳ ಸ್ಫೋಟ, ಮಣ್ಣು ಅಗೆದಂತಹ ಕೆಲಸಗಳಿಗೆ ನೆರವಾಗುತ್ತಿದ್ದರು. ಮಸ್ಕಲ್ ಗ್ರಾಮದ ಶಾಲೆ ಬಳಿಯ ಬಂಡೆಗಳನ್ನು ಒಡೆಯಲು ಜಿಲೆಟಿನ್ ಕಡ್ಡಿಗಳನ್ನು ತರಿಸಿದ್ದು, ಇದರಲ್ಲಿ ಉಳಿದವನ್ನು ಲಕ್ಷ್ಮಿಕಾಂತ್ ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.