ಟೀಂ ಇಂಡಿಯಾ ವಿರುದ್ಧ ಗೆದ್ದರೆ ಪಿಸಿಬಿಗೆ “ಬ್ಲ್ಯಾಂಕ್ ಚೆಕ್”!

Prasthutha|

ಕರಾಚಿ; ಬಹುನಿರೀಕ್ಷಿತ ಐಸಿಸಿ ಟಿ- 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇಯಲ್ಲಿ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ವಿಜಯಿಯಾದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ [ ಪಿಸಿಬಿ] ಗೆ ಬಂಪರ್ ಬಹುಮಾನವೊಂದು ದೊರೆಯಲಿದೆ.

- Advertisement -

ಟಿ-20 ವಿಶ್ವಕಪ್ನಲ್ಲಿ ಭಾರತವನ್ನು ಪಾಕಿಸ್ತಾನ ತಂಡ ಸೋಲಿಸಿದರೆ ಪ್ರಮುಖ ಹೂಡಿಕೆದಾರರೊಬ್ಬರು ಸಹಿ ಮಾಡಿದ  “ಖಾಲಿ ಚೆಕ್”ನ್ನು ಪಿಸಿಬಿಗೆ ನೀಡಲು ಮುಂದೆ ಬಂದಿರುವುದಾಗಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್’ಗೆ ಬ್ಲ್ಯಾಂಕ್ ಚೆಕ್ ಬಂಪರ್ ಆಗಿ ಪರಿಣಮಸಲಿದೆ. ಆದರೆ ಬಲಿಷ್ಠ ಟೀಮ್ ಇಂಡಿಯಾವನ್ನು ಮಣಿಸುವುದು ಸುಲಭದ ಮಾತಲ್ಲ.

 “ಬಿಸಿಸಿಐ ಬಯಸಿದರೆ ಪಿಸಿಬಿ ಪತನ”

- Advertisement -

ಇಸ್ಲಾಮಾಬಾದ್ನಲ್ಲಿ ಗುರುವಾರ ಅಂತರ ಪ್ರಾಂತೀಯ ವ್ಯವಹಾರಗಳ ಸೆನೆಟ್ ಸ್ಥಾಯಿ ಸಮಿತಿಯ ಮುಂದೆ ಹಾಜರಾದ ರಮೀಜ್ ರಾಜಾ, ‘ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ [ಐಸಿಸಿ]ಗೆ ಶೇಕಡಾ 90ರಷ್ಟು ನಿಧಿ ಭಾರತದಿಂದ ಬರುತ್ತದೆ.ಐಸಿಸಿಯು ನೀಡುತ್ತಿರುವ ಶೇಕಡಾ 50ರಷ್ಟು ಸಹಾಯಧನದಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಾಗಿತ್ತದೆ.ಹೀಗಾಗಿ ಐಸಿಸಿಗೆ ಬಿಸಿಸಿಐ ಧನಸಹಾಯವನ್ನು ನಿಲ್ಲಿಸಿದರೆ ಪಿಸಿಬಿ ಪತನವಾಗಲಿದೆ ಎಂಬ ಬಗ್ಗೆ ಆತಂಕವಿದೆ. ಯಾಕೆಂದರೆ ಐಸಿಸಿಗೆ ಪಿಸಿಬಿ ಹಣವನ್ನು ನೀಡುತ್ತಿಲ್ಲ. ಹಾಗಾಗಿ ಪಾಕಿಸ್ತಾನ ಕ್ರಿಕೆಟ್ ಅನ್ನು ಬಲಿಷ್ಠಗೊಳಿಸಲು ಪಣತೊಟ್ಟಿದ್ದೇನೆ’ ಎಂದು ರಾಜಾ ಹೇಳಿದ್ದಾರೆ.

ಕಳೆದ ತಿಂಗಳು ಭದ್ರತಾ ಕಾರಣಗಳನ್ನು ಒಡ್ಡಿ ನ್ಯೂಜಿಲೆಂಡ್ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿತ್ತು. ಪಿಸಿಬಿ ಆರ್ಥಿಕವಾಗಿ ಬಲಾಢ್ಯವಾಗಿದ್ದರೆ ತಂಡಗಳು ಹಿಂಜರಿಯುವುದಿಲ್ಲ ಎಂದು ರಮೀಜ್ ರಾಜಾ ಹೇಳಿದರು. ಬಿಸಿಸಿಐ ಆತಿಥ್ಯ ವಹಿಸುತ್ತಿರುವ ಈ ಬಾರಿಯ ಟ್ವೆಂಟಿ-20 ವಿಶ್ವಕಪ್ ಯುಎಇ ಹಾಗೂ ಒಮಾನ್ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಜರುಗಲಿದ್ದು, ಎರಡು ಗುಂಪಿನಲ್ಲಿ 8 ತಂಡಗಳು 4 ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ. ಪ್ರತಿಗುಂಪಿನಲ್ಲಿ ಅಗ್ರ 2 ಸ್ಥಾನ ಗಳಿಸುವ ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 24ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.



Join Whatsapp