ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಉದ್ಘಾಟಿಸಿದ ಪ್ರತಿಮೆಯೊಂದರ ಫಲಕದ ಮೇಲಿದ್ದ ಅವರ ಹೆಸರಿಗೆ ಕಪ್ಪು ಬಣ್ಣ ಬಳಿದಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 150 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ.
ದಾದ್ರಿಯ ಖಾಸಗಿ ಕಾಲೇಜೊಂದರಲ್ಲಿ 9ನೇ ಶತಮಾನದ ರಾಜ ಮಿಹಿರ್ ಭೋಜ್ನ 15 ಅಡಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಯೋಗಿ ಆದಿತ್ಯನಾಥ್ ಸೆ.22 ರಂದು ಅದರ ಉದ್ಘಾಟನೆ ಮಾಡಿದ್ದರು. ಆದರೆ, ಪ್ರತಿಮೆಯ ಕೆಳಗಿನ ಫಲಕದಲ್ಲಿ ರಾಜನ ಹೆಸರ ಮುಂಚೆ ‘ಗುರ್ಜಾರ್’ ಎಂಬ ಶಬ್ದವನ್ನು ತೆಗೆಯಲಾಗಿತ್ತು. ಈ ಬಗ್ಗೆ ಗುರ್ಜಾರ್ ಸಮುದಾಯದ ಜನರು ಆವೇಶಕ್ಕೊಳಗಾಗಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಮಹಾಪಂಚಾಯತ್ ನಡೆಸಿದ್ದರು ಎನ್ನಲಾಗಿದೆ.
ಮಂಗಳವಾರದಂದು ಹಲವು ಜನ ಗುಂಪಾಗಿ ಬಂದು ಫಲಕದ ಮೇಲಿದ್ದ ಸಿಎಂ ಹೆಸರಿನ ಮೇಲೆ ಕಪ್ಪು ಪೇಂಟ್ ಬಳಿದು ಹೋದರು ಎಂದು ತಿಳಿದು ಬಂದಿದೆ.