ರಾಜ್ಯ ರಾಜಧಾನಿಯ 8 ಆಸ್ಪತ್ರೆಗಳಲ್ಲಿ 179 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿ :14 ಸಾವು

Prasthutha|

ಬೆಂಗಳೂರಿನ 8 ಆಸ್ಪತ್ರೆಗಳಲ್ಲಿ 179 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿದ್ದು, 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವ ಮಾಹಿತಿಯನ್ವಯ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಬೆಂಗಳೂರಿನ 8 ಆಸ್ಪತ್ರೆಗಳಲ್ಲಿ ಈ ವರೆಗೂ 179 ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಹಾಗೂ 54 ಮಂದಿ ಸೋಂಕಿತರಲ್ಲಿ ದೃಷ್ಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

- Advertisement -


ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂದ್ರ ಸೋಂಕು ಎನ್ನುವುದು ಕೋವಿಡ್ -19 ರೋಗಿಗಳಲ್ಲಿ ಸಂಭವಿಸುವ ಒಂದು ಅವಕಾಶವಾದಿ ಶಿಲೀಂಧ್ರ ಸೋಂಕಾಗಿದೆ. ವೈರಸ್ ಕಾಯಿಲೆಯಿಂದಾಗಿ ರೋಗ ನಿರೋಧಕ ಶಕ್ತಿಯು ಹೆಚ್ಚು ಕುಂದುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಎಂಡೋಸ್ಕೋಪಿಕ್ ಸ್ಕಲ್ ಬೇಸ್ ಸರ್ಜರಿಯ ಕಾರ್ಯಕ್ರಮ ನಿರ್ದೇಶಕ ಡಾ.ಗೌರವ್ ಮೆದಿಕೇರಿ ಅವರು, ಈ ವರೆಗೂ ನಮ್ಮಲ್ಲಿ 60 ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ನಾಲ್ವರಲ್ಲಿ ಕಣ್ಣಿನ ತೊಂದರೆ ಉಂಟಾಗಿದೆ. ಆದರೆ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.


ಅಪೊಲೊ ಆಸ್ಪತ್ರೆಯಲ್ಲಿ, ಒಟ್ಟು 25 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಓರ್ವ ರೋಗಿಯ ಸಂಪೂರ್ಣ ದೃಷ್ಟಿ ನಷ್ಟವಾಗಿದ್ದು, ಮೂರು ರೋಗಿಗಳಲ್ಲಿ ಭಾಗಶಃ ನಷ್ಟವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಪೊಲೊ ಆಸ್ಪತ್ರೆಯ ಇಎನ್‌ಟಿ ಡಾ.ಸತೀಶ್ ನಾಯರ್ ಮಾತನಾಡಿ, ಆರಂಭದಲ್ಲಿ ರೋಗಲಕ್ಷಣಗಳು ಮೂಗು ಕಟ್ಟಿಕೊಳ್ಳುವಿಕೆ, ಹಲ್ಲುಗಳಲ್ಲಿನ ಸಂವೇದನೆ ಕಳೆದುಕೊಳ್ಳುವುದು, ಕೆನ್ನೆ ನೋವು ಮತ್ತು ಮೂಗಿನಿಂದ ಕಪ್ಪುದ್ರವ ವಿಸರ್ಜನೆ ಪ್ರಾರಂಭವಾಗುತ್ತವೆ. ನಂತರ ಅದು ಕಣ್ಣುಗಳಿಗೆ ಹರಡುತ್ತದೆ ಮತ್ತು ಕೆಂಪು ಊತ, ದೃಷ್ಟಿ ಹೀನವಾಗುವಂತೆ ಮಾಡುತ್ತದೆ. ಆರಂಭಿಕ ಹಂತಗಳಲ್ಲೇ, ಚಿಕಿತ್ಸೆ ಪಡೆದರೆ ಉತ್ತಮ. ದೃಷ್ಟಿ ನಷ್ಟವಾದರೆ ನಮಗೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ. ಮೂರನೆಯ ಹಂತದ ಮೆದುಳಿಗೆ ಸೋಂಕು ಪ್ರಸರಿಸಿದರೆ ಇದು ಸಾವಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್ ಮಾತನಾಡಿ, ಇದುವರೆಗೆ ಒಪಿಡಿಗೆ ಬಂದ 20 ಮಂದಿ ಸೇರಿದಂತೆ 32 ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಹದಿನೈದು ಮಂದಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರನ್ನು ಕೋವಿಡ್ -19 ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಒಟ್ಟಾರೆಯಾಗಿ, ಕೋವಿಡ್ -19 ವಾರ್ಡ್‌ನ 11 ರೋಗಿಗಳು ಕಪ್ಪು ಶಿಲೀಂಧ್ರ ಸೋಂಕನ್ನು ಹೊಂದಿದ್ದಾರೆ. ಅವರೆಲ್ಲರೂ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ನಷ್ಟವನ್ನು ಅನುಭವಿಸಿದ್ದಾರೆ. ಅಲ್ಲದೆ ನಾಲ್ಕು ಮಂದಿ ಸಾವನ್ನಪ್ಪಿದ್ದರೆ, ಇನ್ನಿಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದರು.

- Advertisement -


ಸಕ್ರಾ ವರ್ಲ್ಡ್ ಆಸ್ಪತ್ರೆಯ ಇಎನ್ಟಿ, ತಲೆ ಮತ್ತು ಕುತ್ತಿಗೆ ಸರ್ಜರಿ ವಿಭಾಗ ಮುಖ್ಯಸ್ಥ ಡಾ. ಹನಿ ಅಶೋಕ್ ಅವರು ಮಾತನಾಡಿ, ಒಟ್ಟು 11 ಬ್ಲಾಕ್ ಫಂಗಸ್ ಸೋಂಕಿತರು ದಾಖಲಾಗಿದ್ದು, ಅವರಲ್ಲಿ ಮೂವರಿಗೆ ದೃಷ್ಟಿ ನಷ್ಟವಾಗಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಕಪ್ಪು ಶಿಲೀಂಧ್ರದ ಚಿಕಿತ್ಸೆಯು ಮುಖ್ಯವಾಗಿ ಆಂಫೊಟೆರಿಸಿನ್ ಬಿ ಎಂದು ಕರೆಯಲ್ಪಡುವ ಶಿಲೀಂಧ್ರ-ವಿರೋಧಿ ಚುಚ್ಚುಮದ್ದನ್ನು ನೀಡಲಾಗುತ್ತದೆ. ಈ ಜೀವ ಉಳಿಸುವ ಔಷಧಿಗಳ ತೀವ್ರ ಕೊರತೆ ನಮ್ಮಲ್ಲಿದೆ ಎಂದು ಹೇಳಿದ್ದಾರೆ. ಅಂತೆಯೇ ಸೋಂಕಿನಿಂದ ಸತ್ತ ಅಂಗಾಂಶಗಳು, ಮೂಳೆ ಮತ್ತು ಶಿಲೀಂಧ್ರಗಳ ಅವಶೇಷಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ ಎಂದು ಅವರು ಹೇಳಿದರು.

ಆಸ್ಟರ್ ಸಿಎಮ್ಐ ಆಸ್ಪತ್ರೆಯ ಇಎನ್ಟಿ ಸರ್ಜರಿಯ ಕನ್ಸಲ್ಟೆಂಟ್ ಡಾ.ಗಿರೀಶ್ ಆನಂದ್ ಅವರು ತಮ್ಮ ಆಸ್ಪತ್ರೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು, ಅವರಲ್ಲಿ ಮೂವರು ದೃಷ್ಟಿ ನಷ್ಟದಿಂದ ಬಳಲುತ್ತಿದ್ದಾರೆ, ಆದರೆ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಹೇಳಿದರು. ನಾರಾಯಣ ನೇತ್ರಾಲಯದಲ್ಲಿ 24 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅವುಗಳಲ್ಲಿ 20 ಸೋಂಕಿತರಲ್ಲಿ ಒಂದು ಕಣ್ಣಿನಲ್ಲಿ ದೃಷ್ಟಿನಷ್ಟವಾಗಿದ್ದು, ನಾರಾಯಣ ಹೆಲ್ತ್ ಸಿಟಿಯು ಏಪ್ರಿಲ್ ನಿಂದ 18 ರೋಗಿಗಳನ್ನು ವರದಿ ಮಾಡಿದೆ, ಅವರಲ್ಲಿ 5 ಮಂದಿಗೆ ದೃಷ್ಟಿ ನಷ್ಟ ಮತ್ತು ಆರು ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ.
ದೃಷ್ಟಿ ನಷ್ಟ ಅಥವಾ ಸಾವು ಇಲ್ಲದೆ, ಶಿಲೀಂಧ್ರ-ವಿರೋಧಿ ಔಷಧಿಗಳೊಂದಿಗೆ ಚೇತರಿಸಿಕೊಂಡ ಎರಡು ಪ್ರಕರಣಗಳನ್ನು ಮಣಿಪಾಲ್ ಆಸ್ಪತ್ರೆಗಳ ಆಂತರಿಕ ಔಷಧ ಸಲಹೆಗಾರ ಡಾ.ರವಿ ಕುಮಾರ್ ವರದಿ ಮಾಡಿದ್ದಾರೆ. ಕೆಸಿ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗ ಈ ನಾಲ್ಕು ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

Join Whatsapp