ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ನೇಮಕ, ಸಿಎಂ ಇಬ್ರಾಹಿಂಗೆ ನಿರಾಸೆ !

Prasthutha|

ಬೆಂಗಳೂರು; ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಆ ಮೂಲಕ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕ ಸಿಎಂ ಇಬ್ರಾಹಿಂಗೆ ನಿರಾಸೆಯಾಗಿದೆ.

- Advertisement -

ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಲು ತೀವ್ರ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಹರಿಪ್ರಸಾದ್ ಅವರ ನೇಮಕಾತಿಯ ಮೂಲಕ ಜಾತಿ ರಾಜಕಾರಣದ ಮೇಲೆ ಚುನಾವಣೆ ಎದುರಿಸುವ ಮುನ್ಸೂಚನೆ ನೀಡಿದೆ.
ಲಿಂಗಾಯತ ಸಮುದಾಯದ ಮುಂಚೂಣಿ ನಾಯಕ, ಪಕ್ಷದ ಹಿರಿಯ ಮುಖಂಡ, ಉತ್ತರ ಕರ್ನಾಟಕ ಮೂಲದ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲ್ಲೇ, ಈಡಿಗ ಸಮುದಾಯದ ಪ್ರಮುಖ ನಾಯಕ ಬಿ.ಕೆ.‌ ಹರಿಪ್ರಸಾದ್ ಅವರನ್ನು ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ.
ಕರುಬರ ನಂತರ ಅತಿ ದೊಡ್ಡ ಈಡಿಗ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿ ಹರಿಪ್ರಸಾದ್ ಅವರಿಗೆ ಮಣೆ ಹಾಕಲಾಗಿದೆ ಎನ್ನಲಾಗುತ್ತಿದೆ.

ಹರಿಪ್ರಸಾದ್, ಆರ್ ಎಸ್ ಎಸ್ ಮತ್ತು ಬಿಜೆಪಿ ಸಿದ್ದಾಂತಗಳ ಕಡು ವಿರೋಧಿ. ಧರ್ಮದ ಹೆಸರಿನಲ್ಲಿ ನಡೆಸುವ ರಾಜಕಾರಣವನ್ನು ಬಿ.ಕೆ.‌ ಹರಿಪ್ರಸಾದ್ ಬಹಿರಂಗವಾಗಿ ವಿರೋಧ ಮಾಡುತ್ತಾರೆ. ಈ ಸೈದ್ಧಾಂತಿಕ ಬದ್ದತೆ ಕೂಡ ಅವರಿಗೆ ಮಹತ್ವದ ಸ್ಥಾನ ನೀಡಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.‌

- Advertisement -

ರಾಜ್ಯ ಕಾಂಗ್ರೆಸ್’ ನ ಮುಂಚೂಣಿ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ‌ ಶಿವಕುಮಾರ್, ಇಬ್ಬರಿಗೂ ಮಣಿಯದೆ, ಇಬ್ಬರ ಜೊತೆಯೂ ಯಾವುದೇ ಮುಲಾಜು ಇಲ್ಲದೆ ಮಾತನಾಡುವ ಹಿರಿಯ ನಾಯಕ ಹರಿಪ್ರಸಾದ್ ಅವರಿಗೆ ಮಹತ್ವದ ಹುದ್ದೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ.

ಕೆ. ಗೋವಿಂದರಾಜ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕ

ಇದೇ ವೇಳೆ ಒಕ್ಕಲಿಗ ಸಮುದಾಯದ ಕೆ. ಗೋವಿಂದರಾಜ್ ಅವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕನ್ನಾಗಿ ನೇಮಿಸಲಾಗಿದೆ. ಅಲ್ಲದೆ ಲಂಬಾಣಿ ಸಮುದಾಯದ ಪ್ರಕಾಶ್ ರಾಥೋಡ್ ಅವರಿಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಹುದ್ದೆ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಇಬ್ರಾಹಿಂಗೆ ಭಾರೀ ನಿರಾಸೆ ಆಗಿದೆ. ಇಬ್ರಾಹಿಂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದಕ್ಕಾಗಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವುದಾಗಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಇಬ್ರಾಹಿಂ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ

Join Whatsapp