ಹೊಸದುರ್ಗ: ನನ್ನನ್ನು ಹೆಡ್ಗೆವಾರ್ ಮ್ಯೂಸಿಯಂನೊಳಗೆ ಹೋಗದಂತೆ ತಡೆಯಲಾಗದ್ದನ್ಬು ಸಾಬೀತುಪಡಿಸಿದರೆ ನಿಮ್ಮ ಮನೆಯಲ್ಲಿ ಕಸಗುಡಿಸಲು, ಮನೆ ಕಾಯಲೂ ಸಿದ್ಧ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಸುರೇಶ್ ಕುಮಾರ್, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ರಾಜೀವ್ ಅವರಿಗೆ ಸವಾಲು ಹಾಕಿದ್ದಾರೆ.
ತಾನು ದಲಿತ ಎಂಬ ಕಾರಣಕ್ಕೆ ನಾಗ್ಪುರದ ಆರೆಸ್ಸೆಸ್ ಕಚೇರಿಯಲ್ಲಿರುವ ಹೆಡ್ಗೆವಾರ್ ಮ್ಯೂಸಿಯಂಗೆ ಹೋಗಲು ಅವಕಾಶ ನೀಡಿರಲಿಲ್ಲ ಎಂಬ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಆಡಿಯೋ ಮೂಲಕ ತಿರುಗೇಟು ನೀಡಿರುವ ಶೇಖರ್, ನಾನು ಮ್ಯೂಸಿಯಂ ಒಳಹೋಗಿದ್ದ ಸಿಸಿಟೀವಿ ವಿಡಿಯೋ ರಿಲೀಸ್ ಮಾಡಿಸಿ ಎಂದು ಸವಾಲ್ ಹಾಕಿದ್ದಾರೆ.
ಒಂದು ವೇಳೆ ನಾನು ಒಳ ಹೋಗಿದ್ದರೆ ನಿಮ್ಮ ಮನೆಯಲ್ಲಿ ಕಸ ಹೊಡೆಯಲು, ಗೇಟ್ ಕಾಯಲೂ ಸಿದ್ಧ ಎಂದು ಆಡಿಯೋದಲ್ಲಿ ಗೂಳಿಹಟ್ಟಿ ತಿರುಗೇಟು ನೀಡಿದ್ದು, ಇದೇ ವೇಳೆ ಮಾಜಿ ಶಾಸಕ ರಾಜೀವ್ ವಿರುದ್ಧ ಕಿಡಿಗಾರಿದ್ದಾರೆ. ನಾನು ಕುಡಿಯುತ್ತೇನೆ, ನನ್ನಂಥ ಕುಡುಕರಿಂದಲೇ ಇಂದು ಸರ್ಕಾರಕ್ಕೆ ವಾರ್ಷಿಕ 36 ಸಾವಿರ ಕೋಟಿ ರು. ಆದಾಯ ಬರುತ್ತಿದೆ. ಅದೇ ಹಣದಿಂದ ನನಗೂ, ನಿಮಗೂ ಪೆನ್ಷನ್ ಬರುತ್ತಿರೋದು. ನಾನು ರಾಜಕೀಯದಲ್ಲಿ ನಿನಗಿಂತ ಹಿರಿಯ. ನಾನು ಸಚಿವನಾಗಿದ್ದಾಗ ನೀನಿನ್ನೂ ಪೊಲೀಸ್ ಇಲಾಖೆಯಲ್ಲಿದ್ದೆ ಎಂದು ಏಕವಚನದಲ್ಲೇ ತಿರುಗೇಟು ನೀಡಿದರು.