ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು: ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಪಿಎಫ್ ಐ ಸದಸ್ಯರ ವಿರುದ್ಧ ಪ್ರಕರಣಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ಹಿಂಪಡೆದಿತ್ತು ಎಂದು ಬಿಜೆಪಿ ನಾಯಕರು ತಲೆಬುಡ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಸಿ.ಟಿ.ರವಿ, ನಳೀನ್ ಕುಮಾರ್ ಕಟೀಲ್, ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಬಿಜೆಪಿ ಸರ್ಕಾರದ ಸಂಪುಟ ಸಚಿವರು ಸುಳ್ಳಿನ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆ ಮೂಲಕ ಪಿಎಫ್ ಐ ಬೆಳೆಸಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ನಾಯಕರು ಮಾಧ್ಯಮಗಳ ಮುಂದೆ ಉತ್ತರ ಕುಮಾರರ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಬಿಜೆಪಿಯವರು ಇಂತಹ ಆರೋಪ ಮಾಡುವ ಮುನ್ನ ಪಿಎಫ್ ಐ ಸಂಘಟನೆ ಕೈವಾಡವಿದ್ದ ಯಾವ ಪ್ರಕರಣವನ್ನು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಹಿಂಪಡೆಯಲಾಗಿತ್ತು ಎಂದು ದಾಖಲೆಯನ್ನು ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.


ನಾನು ಇತ್ತೀಚೆಗೆ ಪಡೆದ ಆರ್ ಟಿಐ ಮಾಹಿತಿ ಪ್ರಕಾರ 2013-14ನೇ ಸಾಲಿನಿಂದ 2022 ಜನವರಿವರೆಗೂ ಹಿಂಪಡೆದಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದೆ. 251 ಪುಟಗಳ ದಾಖಲಾತಿಯನ್ನು ಸರ್ಕಾರ ಒದಗಿಸಿದೆ. ಅದರ ಮಾಹಿತಿ ಪ್ರಕಾರ, 2015ರಲ್ಲಿ ಸುಮಾರು 135 ಪ್ರಕರಣಗಳಲ್ಲಿ ತಸ್ಲಿಮಾ ಲೇಖಕಿ ಅವರ ಪ್ರಕರಣ ಹಿಂಪಡೆಯಲಾಗಿತ್ತು. 2015ರಲ್ಲಿ ವಿಜಯಪುರ ಹಾಗೂ ಸದಾಶಿವನಗರದಲ್ಲಿ ದೇವರಾಜ ಅರಸು ಅವರ ಪ್ರತಿಮೆ ದ್ವಂಸ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದಾಗ ದಾಖಲೆಯಾದ ಪ್ರಕರಣ ಹಿಂಪಡೆಯಲಾಗಿತ್ತು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

- Advertisement -


2015ರಲ್ಲಿ ಒಟ್ಟು 45 ಕೇಸ್ ಹಿಂಪಡೆದಿದ್ದು, 2015ರಲ್ಲೇ ಟೊಯೋಟಾ ಕಿರ್ಲೋಸ್ಕರ್ ವಾಜಗೊಂಡ ನೌಕರರ ವಿರುದ್ಧದ ಪ್ರಕರಣ ಹಿಂಪಡೆದಿದ್ದೇವೆ. 2015ರಲ್ಲಿ ಸಾಹಿತಿ ಮೇಲೆ ಕೇಸ್ ಹಿಪಡೆಯಲಾಗಿತ್ತು, ಹೊನ್ನಾಳಿಯಲ್ಲಿ ರೈತರ ಮೇಲಿನ ಪ್ರಕರಣ, ದಲಿತ ಸಂಘರ್ಷ ಸಮಿತಿ, ಎನ್ಎಸ್ ಯುಐ ಸದಸ್ಯರ ಮೇಲಿನ ಪ್ರಕರಣ, ಎಸ್ ಇಪಿಎಂ ಕಾರ್ಯಕರ್ತರು ಮಡೆಸ್ನಾನ ವಿರುದ್ಧ ಮಾಡಿದ್ದ ಪ್ರತಿಭಟನೆ ಪ್ರಕರಣ, ಹಿಂದೂ ಮುಸ್ಲಿಂ ಕೋಮು ಗಲಭೆ ಸಂಬಂಧಿಸಿದಂತೆ ಪ್ರಕರಣ ಹಿಂಪಡೆದಿದ್ದು, ಈ ಎಲ್ಲ ಪ್ರಕರಣ ಬಿಜೆಪಿ ಸರ್ಕಾರ ಅವಧಿಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕರ ಹೋರಾಟ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ ಪ್ರಕರಣ, ವಿದ್ಯುತ್ ಸ್ಥಾವರ ವಿರೋಧಿಸಿ ನಡೆದ ಪ್ರತಿಭಟನೆ ವಿರುದ್ಧದ ಪ್ರಕರಣ, ರೈತರ ಪ್ರತಿಭಟನೆ ಪ್ರಕರಣ, ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸಿ ಮಾಡಿದ ಪ್ರತಿಭಟನೆ ಪ್ರಕರಣಗಳನ್ನು ನಮ್ಮ ಸರ್ಕಾರದಲ್ಲಿ ಹಿಂಪಡೆಯಲಾಗಿತ್ತು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.


ಸಮ್ಮಿಶ್ರ ಸರ್ಕಾರ ಸೇರಿದಂತೆ ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 294 ಪ್ರಕರಣಗಳನ್ನು ಹಿಂಪಡೆಯಲಾಗಿದ್ದು, ಈ ಪ್ರಕರಣಗಳಲ್ಲಿ ಹಿಂದೂ ಮುಸ್ಲಿಂ ಗಲಭೆಯಲ್ಲಿ ಕೇವಲ ವ್ಯಕ್ತಿಗಳ ಮೇಲೆ ಆರೋಪ ಇತ್ತೇ ಹೊರತು ಯಾವುದೇ ಸಂಘಟನೆಗಳ ಹೆಸರು ಪ್ರಸ್ತಾಪ ಆಗಿರಲಿಲ್ಲ. ರೈತರು, ಕಳಸಾ ಬಂಡೂರಿ, ಸಾರ್ವಜನಿಕರು, ಪೌರಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣ ಹಿಂಪಡೆಯಲಾಗಿದೆಯೇ ಹೊರತು ಕಾಂಗ್ರೆಸ್ ಸರ್ಕಾರ ಪಿಎಫ್ ಐಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಹಿಂಪಡೆದಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 269 ಪ್ರಕರಣಗಳನ್ನು ಹಿಂಪಡೆದಿದ್ದು, ಅದರಲ್ಲಿ 2019ರಲ್ಲಿ ಹುಣಸೂರಿನಲ್ಲಿ ಹನುಮಜಯಂತಿ ವಿಚಾರ ಹಾಗೂ ಇತರೆ ಸಂಘ ಪರಿವಾರಕ್ಕೆ ಸೇರಿದಂತೆ 61 ಪ್ರಕರಣ ಹಿಂಪಡೆಯಲಾಗಿದೆ. ಟಿಪ್ಪು ಗಲಾಟೆ ಸಂಬಂಧಿಸಿದಂತೆ 21 ಪ್ರಕರಣ, ಇತರೆ 6, ಸಾರ್ವಜನಿಕ ಗಲಭೆ 11, ಕೋಮುಗಲಭೆ 8 ಪ್ರಕರಣ ಸೇರಿದಂತೆ 2020ರಲ್ಲಿ ಒಟ್ಟು 46 ಪ್ರಕರಣ ಹಿಂಪಡೆಯುತ್ತಾರೆ. ಹೀಗೆ ಒಟ್ಟು ಸಂಘಪರಿವಾರಕ್ಕೆ ಸೇರಿದ 100ಕ್ಕೂ ಹೆಚ್ಚು ಪ್ರಕರಣ ಹಿಂಪಡೆದಿದ್ದಾರೆ.


ಇದೆಲ್ಲವೂ ಸರ್ಕಾರ ನೀಡಿರುವ ಮಾಹಿತಿ. ನಮ್ಮ ಅವಧಿಯಲ್ಲಿ ಪಿಎಫ್ ಐ ವಿರುದ್ಧದ ಪ್ರಕರಣ ಹಿಂಪಡೆದಿಲ್ಲ. ಹಿಂಪಡೆದಿದ್ದರೆ, ಅವರು ಕೊಟ್ಟಿರುವ ದಾಖಲೆಯಲ್ಲಿ ಅವರ ಪ್ರಕರಣಗಳು ಇರಬೇಕಿತ್ತು. ಪಿಎಫ್ ಐ ವಿರುದ್ಧ ಯಾವ ಪ್ರಕರಣವನ್ನು ನಾವು ಹಿಂಪಡೆದಿದ್ದೇವೆ ಎಂದು ಬಿಜೆಪಿ ನಾಯಕರು ತೋರಿಸಲಿ. ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿರುವ ಬಿಜೆಪಿ ತನ್ನ ಆರೋಪ ಹಿಂಪಡೆಯಬೇಕು. ಅವರು ದಾಖಲೆ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಲು ಬಯಸುತ್ತೇನೆ. ನಮ್ಮ ಪಕ್ಷ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿದೆ. ಬಿಜೆಪಿಯವರಿಗೆ ಸುಳ್ಳು ಹೇಳದಿದ್ದರೆ, ತಿಂದದ್ದು ಜೀರ್ಣವಾಗುವುದಿಲ್ಲ. ಸುಳ್ಳು ಎಂಬುದು ಅವರ ರಕ್ತದ ಕಣ ಕಣಗಳಲ್ಲಿ ಬೆರೆತಿದೆ. ಇನ್ನಾದರೂ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ, ದಾಖಲೆ ಇಟ್ಟು ಮಾತನಾಡುವುದನ್ನು ಕಲಿಯಲಿ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.



Join Whatsapp