ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರ ಮೇಲೆ ನಡೆಯುತ್ತಿರುವ ದಾಳಿ ಕಾಕತಾಳಿಯವಲ್ಲ. ಇದು ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿಯಾಗಿದೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ.
ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಾಗ ನ್ಯಾಯಾಲಯಕ್ಕೆ ಬಿಜೆಪಿ ಜೈಕಾರ ಹಾಕಿತ್ತು. ಆದರೆ ಉದಯಪುರ ಗಲಭೆ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತು. ನ್ಯಾಯಾಂಗವನ್ನು ಟ್ರೋಲ್ ಮಾಡುವ ಸಂದೇಶಗಳನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಎಲ್ಲೆಡೆ ಪಸರಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಹಿಂದೆ ನ್ಯಾಯಾಂಗದ ನೈತಿಕಸ್ಥೈರ್ಯ ಕುಗ್ಗಿಸುವ, ಒತ್ತಡ ಹೇರುವ ಹಾಗೂ ಬೆದರಿಸುವ ಉದ್ದೇಶ ಅಡಗಿದೆ. ಬಿಜೆಪಿ ಸರ್ಕಾರ ಆಡಳಿತ ವೈಫಲ್ಯ, ದೇಶದ ನಾಗರೀಕರು ಹಾಗೂ ಎಲ್ಲ ವರ್ಗದಿಂದ ಪ್ರತಿರೋಧ ಎದುರಿಸುತ್ತಿದೆ. ನಿರುದ್ಯೋಗ, ಹಣದುಬ್ಬರ, ಸಾಮಾಜಿಕ ಹೋರಾಟ ವಿಚಾರಗಳಿಂದ ದಿನನಿತ್ಯ ಉದ್ಭವಿಸುತ್ತಿರುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು, ಅವಿತುಕೊಳ್ಳಲು ಮೋದಿ ಸರ್ಕಾರ ಇಂತಹ ನೀಚ ಅಭಿಯಾನಗಳನ್ನು ನಡೆಸುತ್ತಿದೆ ಎಂದರು.
ಇತ್ತೀಚಿನ ಬೆಳವಣಿಗೆಗಳು ಬಿಜೆಪಿ ಪಾಲಿಗೆ ಅನುಕೂಲಕರವಾಗಿಲ್ಲ. ಉದಯಪುರದಲ್ಲಿನ ಹತ್ಯೆ ಪ್ರಕರಣದಲ್ಲಿ ಪ್ರಚಾರ ಪಡೆಯಲು ಬಿಜೆಪಿ ಮುಂದಾಗಿತ್ತು, ಆದರೆ ಹಂತಕರು ಬಿಜೆಪಿಯ ಸದಸ್ಯರು ಎಂಬ ವಿಚಾರ ಬೆಳಕಿಗೆ ಬಂದಾಗ ತನ್ನ ವ್ಯವಸ್ಥಿತ ಪಿತೂರಿ ವಿಫಲವಾಯಿತು. ಇನ್ನು ಕಾಶ್ಮೀರದಲ್ಲಿ ಕುಖ್ಯಾತ ಲಷ್ಕರ್ ಉಗ್ರಗಾಮಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಎಂಬುದು ಬೆಳಕಿಗೆ ಬಂದಿದೆ. ಇದೆಲ್ಲದರ ಮಧ್ಯೆ ಬಿಜೆಪಿ ಸರ್ಕಾರ ತನ್ನ ವಫಲ್ಯ ಮುಚ್ಚಿಕೊಳ್ಳಲು ನಕಲಿ ರಾಷ್ಟ್ರೀಯತೆಯನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಪರ ಪ್ರಚಾರ ಮಾಡುವ ಮಾಧ್ಯಮವೊಂದು ರಾಹುಲ್ ಗಾಂಧಿ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ತೇಜೋವಧೆಗೆ ಇಳಿದಿದ್ದು, ಬಿಜೆಪಿ ನಾಯಕರು ಪ್ರಕಟಿಸಿದ್ದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ವಾಹಿನಿ ರಾಹುಲ್ ಗಾಂಧಿ ಅವರು ಕೇರಳದ ಗಲಭೆ ವಿಚಾರವಾಗಿ ನೀಡಿದ ಹೇಳಿಕೆಯನ್ನು, ಉದಯಪುರ ಗಲಭೆ ವಿಚಾರವಾಗಿ ನೀಡಿದ ಹೇಳಿಕೆ ಎಂದು ಉದ್ದೇಶಪೂರ್ವಕವಾಗಿ ಬಿಜೆಪಿಯು ತಿರುಚಿ ಸುಳ್ಳು ಸುದ್ದಿ ಪ್ರಕಟಿಸಿದೆ, ಆ ವಾಹಿನಿ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆ ವಾಹಿನಿ ಕ್ಷಮೆಯಾಚಿಸಿತು. ಬಿಜೆಪಿಯ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಕರ್ತರನ್ನು ಪ್ರಶ್ನಿಸಲು ಛತ್ತೀಸ್ ಗಡ ಪೊಲೀಸರು ಮುಂದಾದಾಗ ಉತ್ತರ ಪ್ರದೇಶ ಪೊಲೀಸರಿಂದ ಪತ್ರಕರ್ತನಿಗೆ ರಕ್ಷಣೆ ನೀಡಲಾಯಿತು. ಹೀಗೆ ಪ್ರತಿ ಹಂತದಲ್ಲಿಯೂ ತಪ್ಪೆಸಗಿರುವ ಪತ್ರಕರ್ತನನ್ನು ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆ ಮೂಲಕ ಬಿಜೆಪಿಯ ಸುಳ್ಳು ಸುದ್ದಿಯ ಜಾಲ ಬಹಿರಂಗವಾಗಿದೆ ಎಂದು ಹೇಳಿದರು.
ನುಪುರ್ ಶರ್ಮಾ ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದಾಗ ಆ ಅರ್ಜಿಯನ್ನು ತಿರಸ್ಕರಿಸಿದ ಪೀಠವು ಅದಕ್ಕೆ ಸೂಕ್ತ ಕಾರಣ ತಿಳಿಸಿತ್ತು. ಈ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಸರ್ಕಾರದ ನಡೆ ಏನಾಗಬಾಕಿತ್ತು? ಜವಾಬ್ದಾರಿಯುತ ಪಕ್ಷ ಏನು ಮಾಡಬೇಕಿತ್ತು? ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಪ್ರಾಮಾಣಿಕ ಹಾಗೂ ನೇರ ನುಡಿಯಲ್ಲಿ ಟೀಕಿಸಿದಾಗ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ಬಿಜೆಪಿ ಮಾಡಿದ್ದಾದರೂ ಏನು?. ತನ್ನ ಪಕ್ಷದ ವಕ್ತಾರೆಯನ್ನು ಖಂಡಿಸಿದ ನ್ಯಾಯ ಪೀಠ ವಿರುದ್ಧವೇ ದಾಳಿ ಮಾಡಿತು. ಬಿಜೆಪಿಯ ಟ್ರೋಲ್ ಪಡೆಗಳು ನ್ಯಾಯಾಧೀಶರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಿಬಿಟ್ಟರು. ಕಾಂಗ್ರೆಸ್ ನಾಯಕ ಹೆಳಿಕೆಗಳನ್ನು ತಿರುಚಿ ಸುಳ್ಳು ಸುದ್ದಿ ಪ್ರಸಾರ ಮಾಡಿದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಂಗ ನಿಂದನೆಯ ಹೇಳಿಕೆಗಳನ್ನು ಪ್ರಕಟಿಸಿದರು. ಇನ್ನು ಬಿಜೆಪಿಯ ಬುದ್ಧಿಜೀವಿಗಳು ನ್ಯಾಯ ಪೀಠಕ್ಕೆ ಪತ್ರ ಬರೆದು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕೇಳಿದರು. ಬಿಜೆಪಿಯ ವಜಾಗೊಳಿಸಿರುವ ಒಬ್ಬ ವ್ಯಕ್ತಿ ಪರವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದ್ದು ಹೇಗೆ? ಅವರಿಗೆ ಏಕಾಏಕಿ ಲಕ್ಷ್ಮಣ ರೇಖೆ ನೆನಪಾಗಿದ್ದೇಕೆ? ಎಂದು ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ನಿಮಿಷ ದ್ವೇಷಪೂರಿತ ಸಂದೇಶಗಳನ್ನು ಪ್ರಕಟಿಸುವಾಗ ಬಿಜೆಪಿಗೆ ಈ ಲಕ್ಷ್ಮಣ ರೇಖೆ ನೆನಪಾಗಲಿಲ್ಲವೇಕೆ? ಕಾರಣ ಇದರ ಹಿಂದೆ ಪ್ರಧಾನಮಂತ್ರಿಗಳ ಕಚೇರಿಯ ಕೃಪಾಪೋಷಣೆ ಇತ್ತು. ಇದಿಷ್ಟೇ ಅಲ್ಲ, ಈಗ ಕರ್ನಾಟಕ ರಾಜ್ಯದ ಹೈಕೋರ್ಟ್ ನ ಹಿರಿಯ ನ್ಯಾಯಧೀಶರು ತಮ್ಮ ಮೇಲೆ ವರ್ಗಾವಣೆ ಬೆದರಿಕೆ ಒತ್ತಡ ಇದ್ದು, ನಾನು ಕೇವಲ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. 2014ರ ನಂತರ ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಣದ ಶಕ್ತಿಗಳು ಈ ರೀತಿ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ. ಈ ವಿಚಾರಗಳನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸುವಂತೆ ಕೋರುತ್ತೇವೆ ಎಂದರು.
ನೂರು ಕೋಟಿ ಧ್ವನಿಗಳಿರುವ ದೇಶದಲ್ಲಿ ಬಿಜೆಪಿ ಎಷ್ಟು ಧ್ವನಿಗಳನ್ನು ಅಡಗಿಸಲು ಸಾಧ್ಯ?. ಸಂವಿಧಾನದ ಮೇಲೆ ನಿರ್ಮಿಸಿರುವ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಎಷ್ಟು ಸಂಸ್ಥೆಗಳನ್ನು ನಾಶಪಡಿಸಲಿದೆ?. ಬಿಜೆಪಿಯ ದುರಾಡಳಿತ ಹಾಗೂ ವೈಫಲ್ಯ ಎದುರಿಸುತ್ತಿರುವ ದೇಶದಲ್ಲಿ ಬಿಜೆಪಿ ಎಷ್ಟು ದಿನಗಳ ಕಾಲ ಇಂತಹ ವಿಭಜನೆಯ ಅಭಿಯಾನಗಳ ಹಿಂದೆ ಅವಿತುಕೊಳ್ಳಲಿದೆ? ಎಂದು ಅವರು ಪ್ರಶ್ನಿಸಿದರು.
ನ್ಯಾಯಾಂಗದ ಮೇಲೆ ಬಿಜೆಪಿಯ ಸಂಘಟಿತ ಹಾಗೂ ಪೂರ್ವನಿಯೋಜಿತ ದಾಳಿ: ಅಭಿಷೇಕ್ ಮನು ಸಿಂಘ್ವಿ
Prasthutha|