ಮಂಜಲ್ಪುರದಲ್ಲಿ ಬಿಜೆಪಿಯ ದೊಡ್ಡ ತಲೆನೋವು ನಿವಾರಣೆ: ಕೊನೆಗೂ ಯೋಗೇಶ್ ಪಟೇಲ್’ಗೆ ಟಿಕೆಟ್ ಘೋಷಣೆ

Prasthutha|

ಅಹ್ಮದಾಬಾದ್: ಮಂಜಲ್ಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಯೋಗೇಶ್ ಬದಲು ಹೊಸಬರಿಗೆ ಟಿಕೆಟ್ ನೀಡಲು ಬಿಜೆಪಿ ಹೊರಟಿತ್ತು. ಅದು ತುಂಬ ಟೀಕೆಗೆ ಒಳಗಾಗಿತ್ತು. ಜಾತಿ ಜಗಳದ ಸ್ವರೂಪವನ್ನೂ ಅದು ಪಡೆಯುವ ಹೊತ್ತಿನಲ್ಲಿ ಎಚ್ಚೆತ್ತುಕೊಂಡ ಬಿಜೆಪಿಯು ಪಕ್ಷದ ಹಿರಿಯ ಮುಖಂಡ ಯೋಗೇಶ್ ಪಟೇಲರಿಗೇ ಟಿಕೆಟ್ ನೀಡಿ ಅಪಾಯದಿಂದ ಪಾರಾಗಿದೆ.

- Advertisement -

ಪ್ರಾದೇಶಿಕ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಂತಿಮವಾಗಿ ಇಂದು ಯೋಗೇಶ್ ಪಟೇಲರ ಹೆಸರು ಘೋಷಿಸಿದರು. ಕೂಡಲೆ ಅವರು ಪಟಾಕಿ ಸಿಡಿಸಿ ತಮ್ಮ ಬೆಂಬಲಿಗರೊಡನೆ ಇಂದೇ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.

ಮೊದಲು ಮೂರು ಹಂತದಲ್ಲೂ ಹಿರಿಯ ನಾಯಕ ಪಟೇಲರ ಹೆಸರು ಘೋಷಿಸದೆ ಬಿಜೆಪಿ ಆಟವಾಡಿದಾಗ ಪಟೇಲ್ ಬೆಂಬಲಿಗರು ಘರ್ಷಣೆಗೆ ಸಿದ್ಧರಾಗಿದ್ದರು. ಸ್ವತಂತ್ರ ಸ್ಪರ್ಧಿಯಾಗಲು ಅಗತ್ಯದ ತಯಾರಿಯನ್ನೆಲ್ಲ ನಡೆಸಿದ್ದರು. 

- Advertisement -

ಹಾಲಿ ಮಂಜಲ್ಪುರ ಶಾಸಕರಾದ ಪಟೇಲ್’ಗೆ ಈ ಕ್ಷೇತ್ರದಲ್ಲಿ ಇದು ಏಳನೆಯ ಬಾರಿಯ ಸ್ಪರ್ಧೆ. ಇಲ್ಲಿ ಆನಂದಿ ಬೆನ್ ಅವರ ಮಗಳು ಅನಾರ್ ಪಟೇಲ್ ರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಬಿಜೆಪಿ ವಲಯದಲ್ಲಿ ಸುದ್ದಿ ಹಬ್ಬಿತ್ತು. ಅದಾಗಲೇ ಯೋಗೇಶ್ ಬಣದವರು ಬಂಡಾಯದ ಸೂಚನೆ ನೀಡಿದ್ದರು. ಕೊನೆಗೆ ಹಳೆಯ ಹೆಂಡತಿಯ ಪಾದವೇ ಗತಿ ಎಂಬಂತೆ ಯೋಗೇಶ್ ರಿಗೆ  ಇಂದು ಬಿಜೆಪಿ ಟಿಕೆಟ್ ನೀಡಿದೆ.

ವಡೋದರಾದ ಮಂಜಲ್ಪುರ ಕ್ಷೇತ್ರದಲ್ಲಿ ಶಾಸಕನಾಗಿ ನಾನು ಕೆಲಸ ಮಾಡಿದ್ದೇನೆ, ಟಿಕೆಟ್ ಅವರು ಕೊಡಲೇಬೇಕು. ಸ್ವಲ್ಪ ತಡ ಮಾಡಿದ್ದಾರೆ ಅಷ್ಟೆ ಎಂದು ಯೋಗೇಶ್ ಸಮಜಾಯಿಷಿ ನೀಡಿದರು. 2017ರ ಚುನಾವಣೆಯಲ್ಲಿ ಯೋಗೇಶ್ ಪಟೇಲ್ ಕಾಂಗ್ರೆಸ್ಸಿನ ಚಿರಾಗ್ ಹನ್ಸ್ ಕುಮಾರ್ ಜವೇರಿಯವರನ್ನು 56,362 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಅವರು ಪಡೆದಿದ್ದ ಮತ 1,05,036; ಜವೇರಿ 48,674 ಮತ ಮಾತ್ರ ಪಡೆದಿದ್ದರು.



Join Whatsapp