ಹಿಜಾಬ್ ನೆಪದಲ್ಲಿ ಸೌಹಾರ್ದತೆ ಕದಡಲು ಬಿಜೆಪಿ ಯತ್ನ: ಎಸ್.ಡಿ.ಪಿ.ಐ ಆರೋಪ

Prasthutha|

ಉಡುಪಿ: ಮುಸ್ಲಿಮ್ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾದ ಹಿಜಾಬ್ ಧರಿಸಲು ಹೋರಾಟ ನಡೆಸುತ್ತಿರುವಾಗ ಇದನ್ನೇ ನೆಪವಾಗಿಸಿ ಸಮಾಜದ ಸೌಹಾರ್ದತೆ ಕದಡಿ, ಕೋಮು ಧ್ರುವೀಕರಣ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ಶಾಸಕ ರಘುಪತಿ ಭಟ್ ಮಾಡುತ್ತಿದ್ದಾರೆ ಎಂದು SDPI ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಆರೋಪಿಸಿದ್ದಾರೆ.

- Advertisement -

ಕಾಲೇಜಿನ ಆಡಳಿತ ಮಂಡಳಿ ಸಂಬಂಧಪಟ್ಟವರ ಜೊತೆ ಚರ್ಚಿಸಿ ಬಗೆಹರಿಸಬಹುದಾಗಿದ್ದ ಈ ವಿಚಾರವನ್ನು ಬಿಜೆಪಿ ತನ್ನ ರಾಜಕೀಯಕ್ಕಾಗಿ ದುರ್ಬಳಕೆ ಮಾಡುತ್ತಿದೆ. ಹಿಜಾಬ್ ಧರಿಸಲು ಅವಕಾಶ ನೀಡಿದರೆ ಕಾಲೇಜಿನ್ ಇನ್ನು ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟಾ ಧರಿಸುತ್ತಾರೆ. ಇವತ್ತು ಹಿಜಾಬ್ ಗೆ ಅವಕಾಶ ನೀಡಿದರೆ, ನಮಾಝ್ ಗೆ ಕೂಡ ಅವಕಾಶ ನೀಡಬೇಕಾಗುತ್ತದೆ ಎಂದೆಲ್ಲ ಪ್ರಚೋದನಾಕಾರಿ ಹೇಳಿಕೆ ನೀಡಿ ಜನರಲ್ಲಿ ಗೊಂದಲವನ್ನು ಸೃಷ್ಟಿಸಿದ್ದಾರೆ ಎಂದು ದೂರಿದರು.

ಮಾತ್ರವಲ್ಲ ಕಾಲೇಜು ಆಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡುತ್ತಾ, ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಹಠ ಹಿಡಿದರೆ, ಸಂಘಪರಿವಾರದ ಕಾರ್ಯಕರ್ತರ ಮೂಲಕ ಹೇಗೆ ತಡೆಯಬೇಕೆಂದು ತಿಳಿದಿದೆ ಎಂದು ಬೆದರಿಕೆ ಹಾಕಿರುತ್ತಾರೆ. ಇಂತಹ ಮನಸ್ಥಿತಿಯವರು ಕಾಲೇಜಿನ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳಾಗಿ ಆಯ್ಕೆ ಆಗುವುದರಿಂದ ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕುಗಳಿಂದ ವಂಚನೆಗೊಳಗಾಗುತ್ತಿದ್ದಾರೆ ಎಂದು ಕಿಡಿಕಾರಿದರು.

- Advertisement -

ಈ ನಡುವೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ವಿದ್ಯಾರ್ಥಿನಿಯರ ಮಾನವಹಕ್ಕು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್’ಗೆ ನೋಟಿಸ್ ನೀಡಿರುವುದರಿಂದ ಮುಖಭಂಗಕ್ಕೀಡಾಗಿರುವ ಶಾಸಕ ರಘುಪತಿ ಭಟ್, SDPI ಕುಮ್ಮಕ್ಕಿನಿಂದ ಹಿಜಾಬ್ ವಿವಾದ ಸೃಷ್ಟಿಯಾಗಿದೆ ಎಂಬ ಹತಾಶೆಯಿಂದ ಕೂಡಿದ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಯನ್ನು SDPI ಖಂಡಿಸುವುದರೊಂದಿಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬಿಜೆಪಿಯ ಷಡ್ಯಂತ್ರಕ್ಕೆ ಬಲಿಯಾಗಬಾರದು. ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬೆಂಬಲ ಸೂಚಿಸಬೇಕೆಂದು ನಝೀರ್ ಅಹ್ಮದ್ ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.



Join Whatsapp