ಕಾನ್ಪುರ : ಇತ್ತೀಚೆಗೆ ಭುಗಿಲೆದ್ದ ಘರ್ಷಣೆಗಳ ನಡುವೆ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಯುವ ಘಟಕದ ನಾಯಕ ಹರ್ಷಿತ್ ಶ್ರೀವಾಸ್ತವ ಲಾಲಾ ಅವರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಕಾನ್ಪುರ ಬಿಜೆಪಿ ಯುವ ಘಟಕದ ನಾಯಕ ಹರ್ಷಿತ್ ಶ್ರೀವಾಸ್ತವ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದ ಶಾಂತಿ ವಾತಾವರಣವನ್ನು ಕದಡಲು ಪ್ರಯತ್ನಿಸಿದ ಯುವ ಮೋರ್ಚಾ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಕಾನ್ಪುರ ಪೊಲೀಸರು ತಕ್ಷಣವೇ ಬಂಧಿಸಿದ್ಧಾರೆ.
ವಿವಾದಾತ್ಮಕ ಟ್ವೀಟ್ ಗಾಗಿ ಪ್ರಕರಣ ದಾಖಲಿಸಿದ ನಂತರ ತಕ್ಷಣದ ಕ್ರಮ ಕೈಗೊಂಡು ಹರ್ಷಿತ್ ಶ್ರೀವಾಸ್ತವ ಅವರನ್ನು ಬಂಧಿಸಲಾಯಿತು. ಯಾವುದೇ ಧರ್ಮವನ್ನು ಲೆಕ್ಕಿಸದೆ ನಗರದ ಶಾಂತಿ ಕದಡುವವರನ್ನು ಬಿಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು.
ಜೂನ್ 03 ರಂದು ಕಾನ್ಪುರದಲ್ಲಿ ಬಂದ್ ಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೋಪಗೊಂಡ ಜನರ ಗುಂಪು ಅಂಗಡಿಗಳನ್ನು ಮುಚ್ಚುವಂತೆ ಕೇಳಿದ ನಂತರ ಈ ಘಟನೆ ಸಂಭವಿಸಿತ್ತು.