ಬೆಂಗಳೂರು: ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಅದನ್ನು ಜೋಡಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಭಯದ ವಾತಾವರಣ ಉಂಟು ಮಾಡಲಾಗಿದೆ ಎನ್ನುವ ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಕಬ್ಬಿಣದಿಂದ ಸೂಜಿ ಮತ್ತು ಕತ್ತರಿ ತಯಾರಿಸಬಹುದು. ಕಾಂಗ್ರೆಸ್ ಸೂಜಿಯಿಂದ ಹೊಲಿಯುವ ಕೆಲಸ ಮಾಡುತ್ತಿದ್ದರೆ, ಬಿಜೆಪಿಯವರು ಕತ್ತರಿಯಿಂದ ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆವು. ಈ ಹಾಡೇ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ನೀಡಿರುವ ಸಂದೇಶ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವುದೇ ನಮ್ಮ ಗುರಿ ಹಾಗೂ ಉದ್ದೇಶ. ಬಿಜೆಪಿಯವರು ಸತ್ಯಶೋಧನ ಸಮಿತಿಯ ಮೂಲಕ ಅವರಿಗೆ ಏನು ಬೇಕೋ ಅದನ್ನು ಹೇಳುತ್ತಿದ್ದಾರೆ. ನಾವು ಸಮಾಜ ಜೋಡಿಸುತ್ತಿದ್ದರೆ, ಅವರು ಒಡೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ ಎಂದರು.