ಕುರುಕ್ಷೇತ್ರ: ತಮ್ಮ ಮಕ್ಕಳನ್ನು ಗೂಂಡಾ, ಗಲಭೆಕೋರರು ಮತ್ತು ಅತ್ಯಾಚಾರಿಗಳಾಗಬೇಕೆಂದು ಬಯಸುವ ಹೆತ್ತವರು ಅವರನ್ನು ಬಿಜೆಪಿ ಪಕ್ಷಕ್ಕೆ ಕಳುಹಿಸಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಇಂದು ಹರ್ಯಾಣದಲ್ಲಿ 2024ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಕುರುಕ್ಷೇತ್ರದಲ್ಲಿ ನಡೆದ ಜಾಥಾವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, ದೆಹಲಿಯ ಎಎಪಿ ಸರ್ಕಾರವು ಸರ್ಕಾರಿ ಶಾಲೆಗಳನ್ನು ಪರಿವರ್ತಿಸಿದೆ. ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳು ಈಗ ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವರ್ಷ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ದೆಹಲಿ ಸರ್ಕಾರಿ ಶಾಲೆಗಳನ್ನು ಸೇರಿದ್ದಾರೆ ಎಂದು ಹೇಳಿದ ಅವರು, ದೆಹಲಿ ಸರ್ಕಾರದ 400 ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳ ಮೂಲಕ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ಸರಳ ವ್ಯಕ್ತಿಯಾದ ನನಗೆ ರಾಜಕೀಯ ಗೊತ್ತಿಲ್ಲ. ಸರ್ಕಾರಿ ಶಾಲೆಗಳನ್ನು ನಾನು ಸುಧಾರಿಸಿದ್ದೇನೆ. ದೆಹಲಿಯ ಶಾಲೆಗಳು ಈ ಬಾರಿ ಶೇಕಡಾ 99.7 ರಷ್ಟು ಫಲಿತಾಂಶವನ್ನು ಗಳಿಸಿವೆ. ಮೆಲಾನಿತಾ ಟ್ರಂಪ್ (ಅಮೆರಿಕದ ಮಾಜಿ ಪ್ರಥಮ ಮಹಿಳೆ) ದೆಹಲಿ ಸರ್ಕಾರಿ ಶಾಲೆಗೆ ಭೇಟಿ ನೀಡಲು ಬಂದಿದ್ದರು. ಮನೋಹರ್ ಖಟ್ಟರ್ ಅವರ ಸರ್ಕಾರಿ ಶಾಲೆಯನ್ನು ನೋಡಲು ಯಾರು ಬರುತ್ತಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಲಾಯರ್ ಆಗಬೇಕು ಎನ್ನುವವರು ನಮ್ಮೊಂದಿಗೆ ಬನ್ನಿ. ಗಲಭೆಕೋರರು, ಗೂಂಡಾಗಳು, ರೇಪಿಸ್ಟ್ ಗಳಾಗಬೇಕು ಎನ್ನುವವರು ಅವರ ಜೊತೆ (ಬಿಜೆಪಿ) ಹೋಗುತ್ತಾರೆ ಇಂತಹ ಎಲ್ಲಾ ಅಂಶಗಳು ಆ ಪಕ್ಷದಲ್ಲಿವೆ ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.
“ಅವರು ನಿಮ್ಮ ಮಕ್ಕಳಿಗೆ ಎಂದಿಗೂ ಕೆಲಸ ನೀಡುವುದಿಲ್ಲ. ಏಕೆಂದರೆ ಅವರ ಪಕ್ಷಕ್ಕೆ ನಿರುದ್ಯೋಗಿ ಗೂಂಡಾಗಳು ಬೇಕಾಗಿದ್ದಾರೆ. ಅವರು ನಿಮ್ಮ ಮಕ್ಕಳಿಗೆ ಗಲಭೆ ಮಾಡಲು ಕಲಿಸುತ್ತಾರೆ ಮತ್ತು ಬಿಜೆಪಿಗರ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.